ADVERTISEMENT

ಪೊಲೀಸರಿಗೆ ವಿದೇಶದಲ್ಲಿ ತರಬೇತಿ: ಬೊಮ್ಮಾಯಿ

ಸಶಸ್ತ್ರ ಮೀಸಲು ಪೊಲೀಸರ 7ನೇ ತಂಡದ ನಿರ್ಗಮನ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 15:55 IST
Last Updated 4 ಜನವರಿ 2020, 15:55 IST
ಹಾವೇರಿಯಲ್ಲಿ ‘ಜನಸ್ನೇಹಿ ಪೊಲೀಸ್‌ ಕಿರುಚಿತ್ರ’ದ ಪೋಸ್ಟರ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ  ಶನಿವಾರ ಬಿಡುಗಡೆ ಮಾಡಿದರು
ಹಾವೇರಿಯಲ್ಲಿ ‘ಜನಸ್ನೇಹಿ ಪೊಲೀಸ್‌ ಕಿರುಚಿತ್ರ’ದ ಪೋಸ್ಟರ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ  ಶನಿವಾರ ಬಿಡುಗಡೆ ಮಾಡಿದರು   

ಹಾವೇರಿ: ‘ಒತ್ತಡದ ನಡುವೆಯೇ ಕರ್ತವ್ಯ ನಿರ್ವಹಿಸುವ ಪೊಲೀಸರ ಕಾರ್ಯಾಚರಣೆಗೆ ಹೊಸ ಆಯಾಮ ನೀಡುವ ಉದ್ದೇಶವಿದೆ. ವಿದೇಶ ಹಾಗೂ ಬೇರೆ ಬೇರೆ ತರಬೇತಿ ಕೇಂದ್ರಗಳಿಗೆ ನಮ್ಕ ಸಿಬ್ಬಂದಿಯನ್ನು ಕಳುಹಿಸಿ ನುರಿತ ತಜ್ಞರಿಂದ ತರಬೇತಿ ಕೊಡಿಸುವ ಚಿಂತನೆ ಇದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿಶನಿವಾರ ನಡೆದ ಕೆರಿಮತ್ತಿಹಳ್ಳಿ ತಾತ್ಕಾಲಿಕ ಪೊಲೀಸ್‌ ತರಬೇತಿ ಕೇಂದ್ರದ ಸಶಸ್ತ್ರ ಮೀಸಲು ಪೊಲೀಸರ 7ನೇ ತಂಡದ ನಿರ್ಗಮನ ಪಥಸಂಚಲನ ಹಾಗೂ ‘ಜನಸ್ನೇಹಿ ಪೊಲೀಸ್‌’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸ್‌ ತರಬೇತಿ ಪಡೆದರೆ ಜೀವನದಲ್ಲಿ ಹೊಸ ಅನುಭವ ಪಡೆದಂತಾಗುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ಜೀವನದಲ್ಲಿ ಯಾವುದನ್ನು ಮಾಡುವುದಕ್ಕೆ ಸಾಧ್ಯವಿಲ್ಲವೋ ಅದನ್ನು ಪೊಲೀಸ್‌ ತರಬೇತಿಯಲ್ಲಿ ನೀಡಲಾಗಿದೆ. ಇಲ್ಲಿ ನಿಮ್ಮ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ತೋರಿಸುವುದಕ್ಕೆ ಸಾಧ್ಯವಾಗಿದೆ ಎಂದರು.

ADVERTISEMENT

ಕರ್ನಾಟಕ ಪೊಲೀಸ್‌ ದೇಶದಲ್ಲಿಯೇ ತನ್ನ ಸಾಹಸ ಮತ್ತು ಸವಾಲು ಎದುರಿಸುವಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು, ಅದನ್ನು ಪ್ರಶಿಕ್ಷಣಾರ್ಥಿಗಳು ಕಾಪಾಡಿಕೊಳ್ಳಬೇಕು ಎಂದರು.

ಪೊಲೀಸರಿಗೆ ಎಲ್ಲ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಬರಲೆಂದು ವಿಶೇಷ ಪಠ್ಯಕ್ರಮವನ್ನು ರೂಪಿಸಲಾಗಿದೆ. ತಾಂತ್ರಿಕ ಜಗತ್ತು ಬೆಳೆದಂತೆ ಅಪರಾಧ ಸಂಖ್ಯೆಗಳು ಹೆಚ್ಚಾಗುತ್ತಿವೆ. ಅದನ್ನು ತಡೆಯುವುದಕ್ಕಾಗಿ ಪ್ರತಿಯೊಬ್ಬಪೊಲೀಸ್‌ ಸಿಬ್ಬಂದಿಗೂ ತಂತ್ರಜ್ಞಾನದ ತರಬೇತಿ ಸಿಗುವಂತೆ ಮಾರ್ಗಸೂಚಿಯನ್ನು ತಯಾರಿಸಲಾಗುತ್ತಿದೆ. ಅಲ್ಲದೇ, ಕರ್ತವ್ಯದಲ್ಲಿರುವ ಪ್ರತಿ ಸಿಬ್ಬಂದಿಗೂ ಐದು ವರ್ಷಕ್ಕೊಮ್ಮೆ ತರಬೇತಿ ನೀಡುವ ಯೋಜನೆ ಇದೆ ಎಂದರು.

ಪರಿಹಾರ ವಿತರಣೆ

ಕಾರವಾರದ ಕೋರ್ಮಗಡ ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದ ಶಿಗ್ಗಾವಿ ತಾಲ್ಲೂಕಿನ ಕುಟುಂಬಸ್ಥರಿಗೆ ಸರ್ಕಾರದಿಂದ ₹27 ಲಕ್ಷ ಮೌಲ್ಯದ ಚೆಕ್‌ ಅನ್ನು ಸಚಿವ ಬಸವರಾಜ ಬೊಮ್ಮಾಯಿ ವಿತರಿಸಿದರು.

ಪದವಿಧರರೇ ಹೆಚ್ಚು

ಸಶಸ್ತ್ರ ಮೀಸಲು ಪೋಲಿಸರಾಗಿ ಆಯ್ಕೆಯಾದವರಲ್ಲಿ ಸ್ನಾತಕೊತ್ತರ ಪದವಿ ಪಡೆದವರು 6, ಬಿ.ಎ ಪದವಿ 52, ಬಿ.ಕಾಂ 15, ಬಿಬಿಎಂ 3, ಎಂಬಿಎ 1, ಬಿಇ 1, ಬಿ.ಪಿ.ಇಡಿ 1, ಬಿ.ಇಡಿ. 1, ಪಿಯುಸಿ 16, ಎಸ್ಸೆಸ್ಸೆಲ್ಸಿ 1 ಸೇರಿದಂತೆ ಇನ್ನಿತರ ವಿದ್ಯಾರ್ಹತೆ ಹೊಂದಿದವರು ತರಬೇತಿಯಲ್ಲಿ ಇದ್ದರು.

ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ

99 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದುಕೊಂಡಿದ್ದು, ಈ ಸಮಯದಲ್ಲಿ ಒಳಾಂಗಣ ಮತ್ತು ಹೊರಾಂಗಣ ವೃತ್ತಿ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ಜಿಲ್ಲೆಯ ಎಸ್‌. ಮಾಸಪ್ಪ ಅವರಿಗೆ ಸರ್ವೋತ್ತಮ ಪ್ರಶಸ್ತಿ ನೀಡಲಾಯಿತು. ಒಳಾಂಗಣದಲ್ಲಿ ಆರ್‌.ಶಿವರಾಜಕುಮಾರ್‌ (ಪ್ರಥಮ), ನಾಗರಾಜ ಕುರುಬರ (ದ್ವಿತೀಯ), ಡೊಂಗ್ರಿಖಾನ್‌ ಗೋರೆಖಾನ್‌ (ತೃತೀಯ) ಬಹುಮಾನ ಪಡೆದರು. ಹೊರಾಂಗಣ ವಿಭಾಗದಲ್ಲಿ ಎಸ್‌.ಮಾಸಪ್ಪ (ಪ್ರಥಮ) ಕೆ.ಆರ್‌.ಉಮಾಕಾಂತ (ದ್ವಿತೀಯ) ಹಾಗೂ ಅಲ್ಲಯ್ಯ (ತೃತೀಯ) ಬಹುಮಾನ ಪಡೆದರು. 0.303 ರೈಫಲ್‌ ಶೂಟಿಂಗ್‌ ವಿಭಾಗದಲ್ಲಿ ಪರಸಪ್ಪ ಅಡವಿ (ಪ್ರಥಮ), ಟಿ. ಕೃಷ್ಣಮೂರ್ತಿ (ದ್ವಿತೀಯ) ಹಾಗೂ ಟಿ.ಮಲ್ಲಿಕಾರ್ಜುನ, ವಿರೇಶ್‌ ಬಡಿಗೇರ (ತೃತಿಯ) ಬಹುಮಾನ ಪಡೆದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ, ಜಿ.ಪಂ.ಸದಸ್ಯ ಸಿದ್ದರಾಜ ಕಲಕೋಟಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.