ADVERTISEMENT

ಕಳಪೆ ಬಿತ್ತನೆ ಬೀಜ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ: ಸಚಿವ ಬಿ.ಸಿ. ಪಾಟೀಲ

ಮೆಕ್ಕೆಜೋಳ ಕ್ವಿಂಟಲ್‌ಗೆ ₹ 1760ರ ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಮೇ 2020, 12:03 IST
Last Updated 1 ಮೇ 2020, 12:03 IST
ಸಚಿವ ಬಿ.ಸಿ. ಪಾಟೀಲ್
ಸಚಿವ ಬಿ.ಸಿ. ಪಾಟೀಲ್   

ಹಾವೇರಿ: ಮೆಕ್ಕೆಜೋಳವನ್ನು ಕ್ವಿಂಟಲ್‌ಗೆ ₹ 1760ರ ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಹಿರೇಕೆರೂರಿನಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 14 ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾದ ಮುಸುಕಿನ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂಬುದು ರೈತರ ಬಹುದಿನದ ಬೇಡಿಕೆಯಾಗಿತ್ತು. ಅದನ್ನು ಬಿ.ಎಸ್‌.ಯಡಿಯೂರಪ್ಪ ಅವರು ಈಡೇರಿಸಿದ್ದಾರೆ ಎಂದರು.

ಕಳಪೆ ಬಿತ್ತನೆ ಬೀಜ ವಶ: ಹಾವೇರಿ, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿ ಮುಸುಕಿನಜೋಳ, ಸೂರ್ಯಕಾಂತಿ ಹಾಗೂ ಹತ್ತಿಯ ಕಳಪೆ ಬಿತ್ತನೆ ಬೀಜ ಸೇರಿದಂತೆ ಒಟ್ಟು 1 ಲಕ್ಷದ 685 ಕ್ವಿಂಟಲ್‌ ಕಳಪೆ ಬಿತ್ತನೆ ಬೀಜಗಳನ್ನು ಕೃಷಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ ಎಂದರು.
ಕಳಪೆ ಕೀಟನಾಶಕಗಳು ಕೂಡ ಮಾರಾಟವಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಅವಧಿ ಮುಗಿದ ಮತ್ತು ನಕಲಿ ಕೀಟನಾಶಕಗಳನ್ನು ಮಾರುತ್ತಿರುವ ವರ್ತಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೃಷಿ ಅಧಿಕಾರಿಗಳು ಮತ್ತು ಜಾಗೃತ ದಳಕ್ಕೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ADVERTISEMENT

ಪೊಲೀಸರ ವಿರುದ್ಧ ಬೇಸರ: ಕಳಪೆಬಿತ್ತನೆ ಬೀಜ ತಯಾರಾಗುವ ಆಂಧ್ರಪ್ರದೇಶ, ಹೈದರಾಬಾದ್‌, ವಿಜಯವಾಡ, ಗೋದಾವರಿಯಲ್ಲಿನ ಆರೋಪಿಗಳನ್ನು ಪೊಲೀಸರು ಬಂಧಿಸದೇ ಇರುವುದು ವಿಷಾದನೀಯ. ಡಿಜಿಪಿ, ಗೃಹಮಂತ್ರಿ ಅವರಿಗೆ ಪತ್ರ ಬರೆದಿದ್ದರೂ, ಸರಿಯಾದ ಕ್ರಮ ಕೈಗೊಂಡಿಲ್ಲ. ರೈತರನ್ನು ಜೀವಂತವಾಗಿ ಸಮಾಧಿ ಮಾಡುವ ಕೆಲಸ ಇದು. ಆರೋಪಿಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ, ಕೂಡಲೇ ಪೊಲೀಸರು ಬಂಧಿಸಬೇಕು ಎಂದು ಒತ್ತಾಯಿಸಿದರು.

ಆಂಧ್ರಪ್ರದೇಶದಲ್ಲಿ 15 ಸಾವಿರ ಕ್ವಿಂಟಲ್‌ ಕಳಪೆ ಬಿತ್ತನೆ ಬೀಜ ಸಾಗಾಣಿಕೆಗೆ ಸಿದ್ಧವಿದೆ. 5 ಸಾವಿರ ಕ್ವಿಂಟಲ್‌ ಲಾರಿಗಳಲ್ಲಿ ಲೋಡ್‌ ಆಗಿದೆ. ನಾವು ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಒಟ್ಟು 20 ಸಾವಿರ ಕ್ವಿಂಟಲ್ ಕಳಪೆ‌ ಬೀಜಗಳು ರಾಜ್ಯವನ್ನು ಪ್ರವೇಶಿಸುತ್ತಿದ್ದವು. ಆದ್ದರಿಂದ ಪೊಲೀಸರು ತುರ್ತಾಗಿ ಗಡಿಗಳಲ್ಲಿ ಕ್ರಮ ಕೈಗೊಳ್ಳಬೇಕು. ಜತೆಗೆ ಆಂಧ್ರಸರ್ಕಾರಕ್ಕೂ ಪತ್ರ ಬರೆಯಲು ಚಿಂತನೆ ನಡೆದಿದೆ. ಕಳಪೆ ಬೀಜ ಅವ್ಯವಹಾರದ ಬಗ್ಗೆ ಸಿಐಡಿ ತನಿಖೆ ನಡೆಸಲು ಡಿಜಿಪಿ ಒಪ್ಪಿಕೊಂಡಿದ್ದರು. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಸಗೊಬ್ಬರ, ಬಿತ್ತನೆ ಬೀಜದ ಕೊರತೆಯಿಲ್ಲ

ರಾಜ್ಯದಲ್ಲಿ ಈ ವರ್ಷದ ಮುಂಗಾರು ಹಂಗಾಮಿಗೆ 22.10 ದಶಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಕಾಗಿದೆ. ಅದರಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳಿಗೆ ಬೇಕಾದ 5.87 ಲಕ್ಷ ಮೆಟ್ರಿಕ್‌ ಟನ್‌ ಕೊಟ್ಟಿದ್ದೇವೆ. ಬಿತ್ತನೆ ಬೀಜದ ಕೊರತೆ ಇತ್ತು. ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಅವರು ಆದೇಶ ನೀಡಿದ್ದು, ಬಿತ್ತನೆ ಬೀಜ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಹಾಗಾಗಿ ಕೃಷಿ ಚಟುವಟಿಕೆಗೆ ಯಾವುದೇ ಧಕ್ಕೆ ಇಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.