ADVERTISEMENT

ತ್ಯಾಗದ ಕೋಟಾದಲ್ಲಿ ಸಚಿವ ಸ್ಥಾನ: ಬಿ.ಸಿ.ಪಾಟೀಲ

ಕೊಟ್ಟ ಮಾತನ್ನು ಉಳಿಸಿಕೊಂಡ ಬಿಜೆಪಿ: ಸಚಿವ ಬಿ.ಸಿ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 14:57 IST
Last Updated 5 ಆಗಸ್ಟ್ 2021, 14:57 IST
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಹಿರೇಕೆರೂರು ಪಟ್ಟಣಕ್ಕೆ ಗುರುವಾರ ಬಂದ ಬಿ.ಸಿ.ಪಾಟೀಲ ಹಾಗೂ ಯು.ಬಿ.ಬಣಕಾರ ಅವರನ್ನು ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮೂಲಕ ಸ್ವಾಗತಿಸಿದರು  
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಹಿರೇಕೆರೂರು ಪಟ್ಟಣಕ್ಕೆ ಗುರುವಾರ ಬಂದ ಬಿ.ಸಿ.ಪಾಟೀಲ ಹಾಗೂ ಯು.ಬಿ.ಬಣಕಾರ ಅವರನ್ನು ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮೂಲಕ ಸ್ವಾಗತಿಸಿದರು     

ಹಿರೇಕೆರೂರು: ‘ನಾನು ಜಾತಿ ಕೋಟಾದಲ್ಲೂ ಇಲ್ಲ, ಜಿಲ್ಲಾ ಕೋಟಾದಲ್ಲೂ ಇಲ್ಲ, ತ್ಯಾಗದ ಕೋಟಾದಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವಾಗ 17 ಶಾಸಕರಲ್ಲಿ ಇಬ್ಬರೇ ಲಿಂಗಾಯತರು ಇದ್ದೆವು. ಸರ್ಕಾರ ಬರಲು ಕಾರಣರಾದವರಿಗೆ ಕೊಡಲೇಬೇಕೆಂದು ಸಚಿವ ಸ್ಥಾನ ನೀಡಿದ್ದಾರೆ’ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿ ಗುರುವಾರ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಅವರು, ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಲ್ಲೂಕಿನ ಜನತೆಯ ಆಶೀರ್ವಾದ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಸಹಕಾರ ಮರೆಯಲು ಸಾಧ್ಯವಿಲ್ಲ. ಜನತೆ ಮತ್ತೆ ಆಯ್ಕೆ ಮಾಡಿ ದೊಡ್ಡ ಋಣಭಾರ ಹೊರಿಸಿದ್ದಾರೆ. ಅವರ ಋಣ ತೀರಿಸಲು ಆಗುವುದಿಲ್ಲ, ಜನತೆಯ ಋಣ ತೀರಿಸಲು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕರ್ನಾಟಕದ ಕಿರೀಟವಿದ್ದಂತೆ. ಅವರಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಬಲ ಬಂದಂತಾಗಿದೆ. ಈ ಭಾಗದ ಜನತೆ ನಿರೀಕ್ಷೆ ಬಹಳಷ್ಟಿವೆ. ಅಭಿವೃದ್ಧಿಯಲ್ಲಿ ಹಿಂದೆ ಇದ್ದೇವೆ ಎಂಬ ಭಾವನೆ ತೊಡೆದು ಹಾಕಲು ಬಸವರಾಜ ಬೊಮ್ಮಾಯಿ ಶ್ರಮಿಸುತ್ತಾರೆ. ಅವರಿಗೆ ನೆರಳಾಗಿ ನಾವು ಕೆಲಸ ಮಾಡುತ್ತೇವೆ ಎಂದರು.

ಈ ಬಾರಿ ಸಚಿವ ಸ್ಥಾನ ಸಿಗುವುದಿಲ್ಲ ಎಂದು ಕೆಲವರಿಗೆ ಅನುಮಾನ ಇತ್ತು. ಬಿಜೆಪಿ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದು ತೋರಿಸಿಕೊಟ್ಟಿದೆ. ಮುಖ್ಯಮಂತ್ರಿ ಬದಲಾವಣೆಯಾಗಿದ್ದರೂ ಬಿಜೆಪಿ ಸರ್ಕಾರ ಬದಲಾಗಿಲ್ಲ, ಯಡಿಯೂರಪ್ಪ ಬದಲಾವಣೆ ಆಗುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ, ಯಡಿಯೂರಪ್ಪ ಅವರೇ ತ್ಯಾಗ ಮಾಡಿದ್ದಾರೆ ಎಂದರು.

ಸಂಪುಟದಲ್ಲಿ 34 ಜನರು ಸಚಿವರಾಗಲು ಸಾಧ್ಯ. ಹಾಗಾಗಿ, ಸಚಿವ ಸ್ಥಾನ ಸಿಗದವರಿಗೆ ಅಸಮಾಧಾನ ಆಗುವುದು ಸಹಜ. ಶಾಸಕ ನೆಹರು ಓಲೇಕಾರ ಅವರು ಹಿರಿಯರು, ಪಕ್ಷದಲ್ಲಿ ದುಡಿದಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಮಾಡಿ ಕೊಡುತ್ತಾರೆ ಎಂದರು.

ಬಿಜೆಪಿಯವರು ಪ್ರತಿಪಕ್ಷಗಳ ಮುಖಂಡರನ್ನು ಹಣಿಯಲು ಇಡಿ, ಐಟಿ ಬಳಸುತ್ತಿದ್ದಾರೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್‌ ಕುರಿತು ಪ್ರತಿಕ್ರಿಯೆ ನೀಡಿದ ಬಿ.ಸಿ.ಪಾಟೀಲ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಬಿಜೆಪಿ ಯಾವುದೇ ಹೊಗಳಿಕೆ ನಿರೀಕ್ಷೆ ಮಾಡುವುದಿಲ್ಲ. ನಮ್ಮನ್ನು ವಿರೋಧಿಸುವುದೇ ಆಜನ್ಮ ಸಿದ್ಧ ಹಕ್ಕು ಎಂಬಂತೆ ಭಾವಿಸಿದ್ದಾರೆ. ಇಡಿ, ಐಟಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತವೆ ಎಂದು ಹೇಳಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ವನಜಾ ಪಾಟೀಲ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಯ್ಯ ಮಳಿಮಠ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಿ.ಸಿ.ಪಾಟೀಲ ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.