ADVERTISEMENT

ಪ್ರಧಾನಿ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ: ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 9:18 IST
Last Updated 5 ಜುಲೈ 2021, 9:18 IST
   

ಹಿರೇಕೆರೂರ (ಹಾವೇರಿ): 'ದೇಶದ ಪ್ರಧಾನ ಮಂತ್ರಿಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. ಮೋದಿ ಅವರಿಗೆ ದುರಹಂಕಾರದ ಲಸಿಕೆ ಕೊಡಬೇಕು ಎನ್ನುವುದಾದರೆ, ಸಿದ್ದರಾಮಯ್ಯ ಏನು ಅಂತ ಮೊದಲು ಹೇಳಲಿ. ಜನರು ಈಗಾಗಲೇ ಅವರಿಗೆ ಉತ್ತರ ಕೊಟ್ಟಿದ್ದಾರೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಮಾಜಿಸಂಸದ ಧ್ರುವನಾರಾಯಣ ಹೇಳಿಕೆಗೆ ತಿರುಗೇಟು ನೀಡಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಮೋದಿ ಅವರ ಕೆಲಸಗಳಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರು ದುರಹಂಕಾರ ಬಿಟ್ಟು, ಲೋಕಸಭೆಯ ವಿರೋಧ ಪಕ್ಷದ ಸ್ಥಾನದ ಯೋಗ್ಯತೆ ಏನು ಎಂಬುದನ್ನು ಕಲಿತುಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.

ಆಗಸ್ 15 ರೊಳಗೆ ನಾಯಕತ್ವ ಬದಲಾವಣೆ ಎಂದು ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಹಾದಿ ಬೀದಿಯಲ್ಲಿ ತೀರ್ಮಾನಿಸುವ ವಿಚಾರವಲ್ಲ. ದಾರಿಯಲ್ಲಿ ಮಾತನಾಡಿ ನಾಯಕತ್ವ ಬದಲಿಸಲು ಸಾಧ್ಯವಿಲ್ಲ. ಶಾಸಕಾಂಗ ಸಭೆ ಇರುತ್ತದೆ. ಅಲ್ಲಿ ಚರ್ಚೆ ಮಾಡಿ, ತೀರ್ಮಾನಿಸುವಂಥದ್ದು. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ವಿವಾದಾತ್ಮಕ ಹೇಳಿಕೆಗೆ ತೆರೆ ಎಳೆಯಲು ಯತ್ನಿಸಿದರು.

ADVERTISEMENT

ಸಚಿವ ಸಿ.ಪಿ.ಯೋಗೇಶ್ವರ ಅವರ ಅಂಬಾರಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯೋಗೇಶ್ವರ್ ಯಾವ ಭಾವನೆಯಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಅದರ ವಿವರಣೆಯನ್ನು ಕೇಳುತ್ತೇನೆ. ಮಂತ್ರಿಗಳು ಮಾಧ್ಯಮಗಳ ಮುಂದೆ ಈ ರೀತಿ ಮಾತನಾಡಬಾರದು. ಕೋವಿಡ್ ಸಂದರ್ಭದಲ್ಲಿ ಜನರ ರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು. ತೂತು ಬಿದ್ದ ಹಡಗು ಯಾವಾಗ ಮುಳುಗುತ್ತದೆ ಎಂಬುದು ಗೊತ್ತಿಲ್ಲ. ಅದರ ರಕ್ಷಣೆಗೆ ಆ ಪಕ್ಷದ ನಾಯಕರು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಮುಳುಗುತ್ತಿರುವ ಹಡಗು ಹತ್ತಲು ಯಾರೂ ಸಿದ್ಧರಿಲ್ಲ. ಆದರೂ ಡಿ.ಕೆ‌. ಶಿವಕುಮಾರ್ ಕೈ ಚಾಚಿ ಯಾರಾದರೂ ರಕ್ಷಿಸಿ ಎಂದು ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.