ADVERTISEMENT

ಸಮಾನತೆಯ ಧ್ವನಿ ಮೊಳಗಲಿ; ಶಶಿಕಲಾ ಹುಡೇದ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 4:22 IST
Last Updated 13 ಅಕ್ಟೋಬರ್ 2020, 4:22 IST
ಹಾವೇರಿಯಲ್ಲಿ ಭಾನುವಾರ ಕವಿ ಗಂಗಾಧರ ನಂದಿಯವರ ‘ಹೆಣ್ಣು ಜಗದ ಕಣ್ಣು’ ಭಾವಗೀತೆಗಳ ಸಿ.ಡಿ. ಬಿಡುಗಡೆ ಸಮಾರಂಭ ನಡೆಯಿತು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಇದ್ದಾರೆ
ಹಾವೇರಿಯಲ್ಲಿ ಭಾನುವಾರ ಕವಿ ಗಂಗಾಧರ ನಂದಿಯವರ ‘ಹೆಣ್ಣು ಜಗದ ಕಣ್ಣು’ ಭಾವಗೀತೆಗಳ ಸಿ.ಡಿ. ಬಿಡುಗಡೆ ಸಮಾರಂಭ ನಡೆಯಿತು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಇದ್ದಾರೆ   

ಹಾವೇರಿ: ‘ಪುರುಷ ಸಮಾಜಕ್ಕೆ ಮಹಾಭಾರತದ ದ್ರೌಪದಿ ಎತ್ತಿದ ಅಂದಿನ ಪ್ರಶ್ನೆಗಳು ಈಗಲೂ ಜೀವಂತ ಇವೆ. ಮನುಕುಲಕ್ಕೆ ಕಳಂಕ ತರುವ ರೀತಿಯಲ್ಲಿ ಹೆಣ್ಣಿನ ಆತ್ಮಬಲ ಕುಗ್ಗಿಸುತ್ತಿರುವ ಘಟನೆಗಳು ಇಂದಿಗೂ ನಡೆಯುತ್ತಿರುವುದು ಕಳವಳಕಾರಿ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ವಿಷಾದ ವ್ಯಕ್ತಪಡಿಸಿದರು.

ಹಾವೇರಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಹಾಗೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಹಿರಿಯ ಕವಿ ಗಂಗಾಧರ ನಂದಿಯವರ ‘ಹೆಣ್ಣು ಜಗದ ಕಣ್ಣು’ ಎಂಬ ಭಾವಗೀತೆಗಳ ಸಿ.ಡಿ. ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹೆಣ್ಣು ಜಗದ ಕಣ್ಣು’ ಎಂಬ ಭಾವನಾತ್ಮಕ ಸಂದೇಶವನ್ನು ಗೌರವಿಸಿದರೂ, ಕಟುವಾಸ್ತವ ಬೇರೇನೇ ಆಗಿದೆ. ಗಂಡು ಹೆಣ್ಣು ಸಮಾನ ಎಂಬ ಭಾವನೆ ಬಂದು, ನಮ್ಮ ದನಿ ಸಮಾನ ಬದುಕಿಗೆ ಎಂದಾಗಬೇಕು ಎಂದರು.

ADVERTISEMENT

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಹೆಣ್ಣಿನ ರಕ್ಷಣೆಗೆ, ನಮ್ಮ ಸಂವಿಧಾನದಲ್ಲಿ ಬೇಕಾದಷ್ಟು ಅವಕಾಶಗಳಿವೆ. ಅವುಗಳಿಗೆ ಬಲ ತುಂಬುವ ಕೆಲಸ ಆಗಬೇಕು. ಹೆಣ್ಣು ಇದ್ದರೇನೇ ಜಗದ ಕಣ್ಣು ಕಾಣುತ್ತವೆ ಎಂಬ ತಿಳಿವಳಿಕೆ ಬರಬೇಕು. ಗಂಡು ಹುಟ್ಟಿದಾಗ ಪೇಡೆ ಹಂಚುವ, ಹೆಣ್ಣು ಹುಟ್ಟಿದಾಗ ಜಿಲೇಬಿ ಕೊಡುವ ಭೇದ–ಭಾವವನ್ನು ತಿರಸ್ಕರಿಸಬೇಕು. ಹೆಣ್ಣು ಭ್ರೂಣಹತ್ಯೆ ಅಮಾನುಷ ಕೃತ್ಯ. ಇಲ್ಲಿ ಪ್ರತಯೊಬ್ಬರಿಗೂ ಜೀವಿಸುವ ಹಕ್ಕಿದೆ ಎಂಬ ಸಂದೇಶ ಹೊರಹೊಮ್ಮಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಚ್.ಬಿ.ಲಿಂಗಯ್ಯ ಹಾಗೂಕವಿ ಗಂಗಾಧರ ನಂದಿ ಮಾತನಾಡಿದರು. ಸಾಹಿತಿ ಸತೀಶ ಕುಲಕರ್ಣಿ, ಮಾರುತಿ ಶಿಡ್ಲಾಪೂರ, ಬಿ.ಬಸವರಾಜಪ್ಪ, ಶಂಭು ನಂದಿ, ಶಿವರಾಜ ಮತ್ತೀಹಳ್ಳಿ, ಎಸ್.ವಿ. ಹಿರೇಮಠ ಮಾತನಾಡಿದರು. ಭಾವಗೀತೆ ಸಿ.ಡಿ. ಕುರಿತು ಡಾ.ಪುಷ್ಪಾ ಶೆಲವಡಿಮಠ ಅನಿಸಿಕೆಗಳನ್ನು ಹಂಚಿಕೊಂಡರು.

ಶಿವಬಸವ ಬಣಕಾರ, ರಾಘವೇಂದ್ರ ಕಬಾಡಿ, ಸತೀಶ ಚವ್ಹಾಣ, ಸವಿತಾ ದಯಾನಂದ, ಸುಮಾ ಗಡಾದ, ರೂಪಕ್ಕ ಹಾವೇರಿ, ಕುಮಾರಿ ಹೊನ್ನಿಕಾ ಪರಗಿ ಅವರನ್ನು ಸನ್ಮಾನಿಸಲಾಯಿತು.ಬಿ.ಬಸವರಾಜ ಸ್ವಾಗತಿಸಿದರು, ವಿರೇಶ ಹಿತ್ತಲಮನಿ ಮತ್ತು ಮಂಜುನಾಥ ಸಣ್ಣಿಂಗಮ್ಮನವರ ನಿರೂಪಿಸಿದರು. ಶಿವಬಸವ ಮರಳಿಹಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.