ADVERTISEMENT

ಭೂ ಸುರಕ್ಷಾ: ಆನ್‌ಲೈನ್‌ನಲ್ಲಿ 4,315 ಪುಟ ಪೂರೈಕೆ

ಸಂತೋಷ ಜಿಗಳಿಕೊಪ್ಪ
Published 31 ಜುಲೈ 2025, 2:05 IST
Last Updated 31 ಜುಲೈ 2025, 2:05 IST
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ  
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ     

ಹಾವೇರಿ: ಕಂದಾಯ ಇಲಾಖೆಯ ಸರ್ವ ದಾಖಲೆಗಳನ್ನು ಆನ್‌ಲೈನ್ ಮೂಲಕ ಒದಗಿಸುವ ಭೂ ಸುರಕ್ಷಾ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದ್ದು, ಒಂದೇ ತಿಂಗಳಿನಲ್ಲಿ 1,500ಕ್ಕೂ ಹೆಚ್ಚು ಅರ್ಜಿದಾರರಿಗೆ 4,315 ಪುಟಗಳ ದಾಖಲೆಯನ್ನು ಪೂರೈಸಲಾಗಿದೆ.

ಜಿಲ್ಲೆಯ ತಹಶೀಲ್ದಾರ್ ಕಚೇರಿ ಸೇರಿದಂತೆ ಎಲ್ಲ ಕಂದಾಯ ಕಚೇರಿಗಳಲ್ಲಿರುವ ದಾಖಲೆಗಳನ್ನು ಡಿಜಟಲೀಕರಣಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಭೂ ಸುರಕ್ಷಾ’ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಹಾನಗಲ್ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದ ಯೋಜನೆ, ಇದೀಗ ಇಡೀ ಜಿಲ್ಲೆಯಲ್ಲಿ ವಿಸ್ತರಿಸಲಾಗಿದೆ.

ಹಳೆಯ–ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು, ನಕಲಿ ದಾಖಲೆಗಳ ಸೃಷ್ಟಿ ತಡೆಗಟ್ಟಲು ಹಾಗೂ ಜನರಿಗೆ ಆನ್‌ಲೈನ್ ಮೂಲಕ ದಾಖಲೆಗಳನ್ನು ಒದಗಿಸುವ ಉದ್ದೇಶ ‘ಭೂ ಸುರಕ್ಷಾ’ ಯೋಜನೆಯದ್ದಾಗಿದೆ.

ADVERTISEMENT

ಜಮೀನಿನ ಪಹಣಿ ಪತ್ರ, ಹಕ್ಕು ಬದಲಾವಣೆ, ಭೂ ಮಂಜೂರಾತಿ, ಭೂಮಿ ಕಾಯ್ದಿರಿಸುವಿಕೆ, ರೈತರ ಹಕ್ಕುಗಳು, ಖಾತೆ ಬದಲಾವಣೆ, ಭೂ ಸುಧಾರಣೆ ಕಾಯ್ದೆ ದಾಖಲೆಗಳು, ವ್ಯಾಜ್ಯದ ದಾಖಲೆ, ಕೈಬರಹದ ದಾಖಲೆ ಸೇರಿದಂತೆ ಹಲವು ದಾಖಲೆಗಳು ಆನ್‌ಲೈನ್‌ ಮೂಲಕ ಲಭ್ಯವಿವೆ. ದಾಖಲೆಗಳನ್ನು ಮೊಬೈಲ್‌ನಲ್ಲಿಯೇ ನೋಡಲು ಅವಕಾಶವಿದ್ದು, ಪ್ರಮಾಣೀಕೃತ ದಾಖಲೆಗಳನ್ನು ಪ್ರತಿ ಪುಟದ ಶುಲ್ಕ ನೀಡಿ ನಾಡಕಚೇರಿ ಹಾಗೂ ಇತರೆ ಕಂದಾಯ ಕಚೇರಿಗಳಲ್ಲಿ ಪಡೆಯಲು ಅವಕಾಶವಿದೆ.  

ಜಿಲ್ಲೆಯ ಹಾನಗಲ್, ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಕಂದಾಯ ಇಲಾಖೆ ಕಚೇರಿಯಲ್ಲಿದ್ದ 70 ಲಕ್ಷ ಪುಟಗಳನ್ನು ಈಗಾಗಲೇ ಡಿಜಟಲೀಕರಣಗೊಳಿಸಲಾಗಿದೆ. ಇಂಥ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಪಡೆದುಕೊಳ್ಳಲು ಜುಲೈ 1ರಿಂದ ಅವಕಾಶ ಕಲ್ಪಿಸಲಾಗಿತ್ತು. 

ಜಿಲ್ಲಾಡಳಿತ ನೀಡಿದ್ದ ಅವಕಾಶ ಬಳಸಿಕೊಂಡಿರುವ 1,500ಕ್ಕೂ ಹೆಚ್ಚು ಜನರು, ಕಂದಾಯ ಇಲಾಖೆಗೆ ಸಂಬಂಧಪಟ್ಟ 4,315 ಪುಟಗಳನ್ನು ಆನ್‌ಲೈನ್ ಮೂಲಕ ಪಡೆದುಕೊಂಡಿದ್ದಾರೆ. ಕಚೇರಿಗೆ ಅಲೆದಾಡದೇ, ಕಡಿಮೆ ಸಮಯದಲ್ಲಿ ಆನ್‌ಲೈನ್ ಮೂಲಕ ದಾಖಲೆ ಸಿಕ್ಕಿದ್ದಕ್ಕೆ ಪ್ರತಿಯೊಬ್ಬರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಸವಣೂರಿನಲ್ಲಿ ಹೆಚ್ಚು ಪುಟ ಪೂರೈಕೆ: ಜಿಲ್ಲೆಯ ತಾಲ್ಲೂಕುಗಳ ಪೈಕಿ ಸವಣೂರು ತಾಲ್ಲೂಕಿನಲ್ಲಿ ಅರ್ಜಿದಾರರಿಗೆ ಆನ್‌ಲೈನ್ ಮೂಲಕ 1,546 ದಾಖಲೆಗಳ ಪುಟಗಳನ್ನು ಪೂರೈಸಲಾಗಿದೆ. ಹಿರೇಕೆರೂರು ತಾಲ್ಲೂಕಿನಲ್ಲಿ ಅತೀ ಕಡಿಮೆಯೆಂದರೆ 121 ಪುಟಗಳನ್ನು ನೀಡಲಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಕ್ರಮೇಣ ಏರಿಕೆಯಾಗುತ್ತಿದೆ.

ಕಚೇರಿ ಅಲೆದಾಟದಿಂದ ಮುಕ್ತಿ:

ಜಿಲ್ಲೆಯ ಕಂದಾಯ ಇಲಾಖೆ ಕಚೇರಿಗಳ ರೆಕಾರ್ಡ್ ಕೊಠಡಿಯಲ್ಲಿ ಹಲವು ಶತಮಾನಗಳ ದಾಖಲೆಗಳಿದ್ದವು. ಕೆಲ ದಾಖಲೆಗಳ ಸಂರಕ್ಷಣೆಯೇ ಸವಾಲಾಗಿತ್ತು. ಕೆಲ ದಾಖಲೆಗಳು ಹಾಳಾಗಿ, ಕಣ್ಮರೆಯಾದ ಘಟನೆಗಳು ನಡೆಯುತ್ತಿದ್ದವು. ಇದರಿಂದಾಗಿ ಸೂಕ್ತ ದಾಖಲೆಗಳಿಗಾಗಿ ಜನರು ಪರದಾಡುತ್ತಿದ್ದರು.

ಜಮೀನು ವ್ಯಾಜ್ಯ ಹಾಗೂ ಇತರೆ ಸೌಲಭ್ಯಕ್ಕಾಗಿ ಹಲವು ವರ್ಷಗಳ ಹಿಂದಿನ ಕಂದಾಯ ದಾಖಲೆಗಳ ಅಗತ್ಯವಿರುತ್ತದೆ. ಇಂಥ ದಾಖಲೆಗಳ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳು ಅರ್ಜಿ ಸಲ್ಲಿಸುತ್ತಿದ್ದ ಅರ್ಜಿದಾರರು, ತಿಂಗಳುಗಟ್ಟಲೇ ಕಚೇರಿಗೆ ಅಲೆದಾಡಬೇಕಿತ್ತು. ಜೊತೆಗೆ, ಹಳೇ ದಾಖಲೆಗಳನ್ನು ಹುಡುಕುವುದು ಸಹ ಅಧಿಕಾರಿಗೆ ಸವಾಲಾಗಿತ್ತು. 

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿಯೇ ರಾಜ್ಯದಾದ್ಯಂತ ಭೂ ಸುರಕ್ಷಾ ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿಯೂ ಈ ಯೋಜನೆ ಅನುಷ್ಠಾನಗೊಳಿಸಿ, ನುರಿತ ಸಿಬ್ಬಂದಿ ಬಳಸಿಕೊಂಡು ಕಂದಾಯ ಇಲಾಖೆ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.

‘ಹಾನಗಲ್ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಯಾಗಿದ್ದರಿಂದ, 1930ರಿಂದ ಇದುವರೆಗಿನ 42 ಲಕ್ಷ ಪುಟದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಟಲೀಕರಣಗೊಳಿಸಲಾಗಿದೆ. ಅದರಲ್ಲಿ 30 ಲಕ್ಷ ದಾಖಲೆಗಳು ಡಿಜಿಟಲ್ ಸಹಿಗಾಗಿ ಅನುಮೋದನೆಗೊಂಡಿದ್ದು, ಉಳಿದ ದಾಖಲೆಗಳ ಅನುಮೋದನೆ ಪ್ರಗತಿಯಲ್ಲಿದೆ’ ಎಂದು ತಹಶೀಲ್ದಾರ್ ರೇಣುಕಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭ್ರಷ್ಟಾಚಾರಕ್ಕೆ ಕಡಿವಾಣ’

ಕಂದಾಯ ಇಲಾಖೆಯ ದಾಖಲೆಗಳನ್ನು ಪಡೆಯಲು ಯಾರಾದರೂ ಅರ್ಜಿ ಸಲ್ಲಿಸಿದರೆ ಅದನ್ನು ಹುಡುಕುವ ನೆಪದಲ್ಲಿ ಕೆಲ ಸಿಬ್ಬಂದಿ ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು. ಆದರೆ ಈಗ ಬಹುತೇಕ ದಾಖಲೆಗಳು ಡಿಜಿಟಲೀಕರಣಗೊಂಡಿವೆ. ಒಂದೆರೆಡು ಕ್ಲಿಕ್‌ನಲ್ಲಿ ದಾಖಲೆ ಕಾಣಿಸುತ್ತದೆ. ಪ್ರೀಂಟ್ ತೆಗೆದುಕೊಳ್ಳುವುದು ಸಹ ಸುಲಭವಾಗಿದೆ. ನಾಡಕಚೇರಿ ತಾಲ್ಲೂಕು ಕಚೇರಿಗಳಲ್ಲಿ ಸದ್ಯ ಆನ್‌ನೈಲ್ ಮೂಲಕ ದಾಖಲೆ ತೆಗೆದುಕೊಡುವ ವ್ಯವಸ್ಥೆಯಿದೆ. ಮುಂಬರುವ ದಿನಗಳಲ್ಲಿ ಎಲ್ಲ ಕಡೆಯೂ ಈ ವ್ಯವಸ್ಥೆ ಜಾರಿಗೊಳಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ.

ಜನರು ಆನ್‌ಲೈನ್‌ ಮೂಲಕ ಕಂದಾಯ ದಾಖಲೆ ಪಡೆಯಬಹುದು. ದಾಖಲೆಗಾಗಿ ಯಾರಾದರೂ ಹೆಚ್ಚಿನ ಹಣ ಕೇಳಿದರೆ ಲೋಪವೆಸಗಿದರೆ ನನಗೆ ದೂರು ನೀಡಬಹುದು
– ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.