ADVERTISEMENT

ಬಿಲ್ಲೇಶ್ವರ ದೇವಸ್ಥಾನ: 12ನೇ ಶತಮಾನದ ಸ್ಮಾರಕ ಶಿಥಿಲ, ಸಾರ್ವಜನಿಕವಾಗಿ ಕಳವಳ

ಬಿಲ್ವಿದ್ಯೆಗಾರರ ಆರಾಧ್ಯ ದೈವ: ಸಡಿಲಗೊಳ್ಳುತ್ತಿರುವ ಮಂಟಪದ ಕಲ್ಲುಗಳು

ಮಾರುತಿ ಪೇಟಕರ
Published 29 ಜನವರಿ 2022, 19:30 IST
Last Updated 29 ಜನವರಿ 2022, 19:30 IST
ಹಾನಗಲ್‌ ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ಬಿಲ್ಲೇಶ್ವರ ದೇವಸ್ಥಾನದ ಹೊರನೋಟ
ಹಾನಗಲ್‌ ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ಬಿಲ್ಲೇಶ್ವರ ದೇವಸ್ಥಾನದ ಹೊರನೋಟ   

ಹಾನಗಲ್: ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ಬಿಲ್ಲೇಶ್ವರ ದೇವಸ್ಥಾನ ಕಟ್ಟಡದ ಕಲ್ಲುಗಳು ಸಡಿಲಗೊಳ್ಳುತ್ತಿವೆ. ಸುಂದರ ಪ್ರಾಚೀನ ಸ್ಮಾರಕ ಶಿಥಿಲಗೊಳ್ಳುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಕಳವಳ ಮೂಡುತ್ತಿದೆ.

ಬಿಲ್ವಿದ್ಯೆಗಾರರ ಆರಾಧ್ಯ ದೈವವಾಗಿ 12ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ ಎಂದು ಶಾಸನಗಳ ಮೂಲಕ ಉಲ್ಲೇಖಿತ ಬಿಲ್ಲೇಶ್ವರ ದೇವಸ್ಥಾನ ಭವ್ಯ ಕುಸುರಿಯ ಕಲ್ಲಿನ ಮಂಟಪ.

ದೇವಸ್ಥಾನ ಒಳಗೆ ಸುಂದರ ಈಶ್ವರ ಲಿಂಗು ಇದೆ. ಈ ದೇವಸ್ಥಾನ ಹಾವೇರಿ, ಶಿರಸಿ, ಶಿವಮೊಗ್ಗ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರನ್ನು ಆಕರ್ಷಿಸುತ್ತದೆ. ಪ್ರಾಚ್ಯವಸ್ತು ಇಲಾಖೆ ಸುಪರ್ದಿಯಲ್ಲಿ ಈ ದೇವಸ್ಥಾನವಿದೆ.

ADVERTISEMENT

ದೇವಸ್ಥಾನದ ಕಟ್ಟಡ ದುರಸ್ತಿ ಕಾರ್ಯವು 8 ವರ್ಷಗಳ ಹಿಂದೆ ನಡೆದಿತ್ತು. ಅಲ್ಲಲ್ಲಿ ಸಡಿಲಗೊಂಡಿದ್ದ ದೇವಸ್ಥಾನದ ಪ್ರಾಚೀನ ಶಿಲೆಗಳನ್ನು ಭದ್ರಗೊಳಿಸುವ ಕಾಮಗಾರಿ ಮೂಲಕ ದೇವಸ್ಥಾನದ ಮೂಲ ವಿನ್ಯಾಸ ಹದಗೆಡದಂತೆ ಸುಂದರಗೊಳಿಸಲಾಗಿತ್ತು.

ಗರ್ಭಗುಡಿ ಆಕಾರದಲ್ಲಿರುವ ಬಿಲ್ಲೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹೆಚ್ಚುವರಿ ಕಲ್ಲುಗಳನ್ನು ಜೋಡಿಸಿ ಭದ್ರಗೊಳಿಸಲಾಗಿತ್ತು. ಹಿಂಭಾಗದ ಕೆತ್ತನೆಯ ಮೂಲ ಕಲ್ಲುಗಳನ್ನು ಮರುಜೋಡಣೆ ಮಾಡಲಾಗಿತ್ತು. ಈಗ ಮತ್ತೆ ಮೂಲ ಕಲ್ಲುಗಳ ಜೋಡಣೆಯಲ್ಲಿ ಬಿರುಕು ಕಾಣಿಸುತ್ತಿದೆ. ಹೊಸದಾಗಿ ಜೋಡಿಸಿಟ್ಟ ಕಲ್ಲುಗಳು ಸಡಿಲಗೊಂಡು ಕಳಚಿಕೊಳ್ಳುತ್ತಿವೆ. ಹೀಗಾಗಿ ಮೂಲ ಸ್ಮಾರಕಕ್ಕೆ ಧಕ್ಕೆ ಬರುವ ಭೀತಿ ಏರ್ಪಟ್ಟಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಿಬ್ಬಂದಿ ಕಿರಣ ಭಟ್ ಎಂಬುವವರು ಬಿಲ್ಲೇಶ್ವರ ದೇವಸ್ಥಾನದ ಜವಾಬ್ದಾರಿ ವಹಿಸಿದ್ದಾರೆ. ದೇವಸ್ಥಾನದ ಕಲ್ಲುಗಳು ಸಡಿಲಗೊಂಡ ಬಗ್ಗೆ ಹಾವೇರಿ ಉಪ ವೃತ್ತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

‘ಸ್ವಚ್ಚತೆ, ಭದ್ರತೆ ಜವಾಬ್ದಾರಿ ಇದೆ. ದೇವಸ್ಥಾನ ದುರಸ್ತಿ ಮತ್ತಿತರ ಕಾರ್ಯಕ್ಕಾಗಿ ಮೇಲಾಧಿಕಾರಿಗಳ ಗಮನಕ್ಕೆ ತರುವುದು ಮಾತ್ರ ನಮ್ಮ ಕೆಲಸ. ಕಿಡಿಗೇಡಿಗಳು ದೇವಸ್ಥಾನದ ಚಾವಣಿ ಏರುವ ಕಾರಣಕ್ಕಾಗಿ ಕಲ್ಲುಗಳು ಸಡಿಲಗೊಳ್ಳುತ್ತಿವೆ’ ಎಂದು ಕಿರಣ ಭಟ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಶುಚಿತ್ವ ಕಣ್ಮರೆ:‌ಪಟ್ಟಣ ಹೊರಭಾಗವಾಗಿದ್ದ ಕಾರಣಕ್ಕಾಗಿ ಬಿಲ್ಲೇಶ್ವರ ದೇವಸ್ಥಾನ ಸಂಜೆ ವಾಯು ವಿಹಾರಿಗಳ ಬದಲಾಗಿ ಮದ್ಯಪ್ರಿಯರ ತಾಣವಾಗಿ ಪರಿಣಮಿಸುತ್ತಿದೆ. ಗುಂಡು–ತುಂಡು ಮತ್ತಿತರ ಅಮಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಇದು ಇಲ್ಲಿ ವಾಯು ವಿಹಾರಕ್ಕೆ ಬರುವ ಜನರ ಧ್ಯಾನಸ್ಥ ಮನಸುಗಳಿಗೆ ಕಿರಿಕಿರಿ ತರುತ್ತಿದೆ.

‘ಹಾನಗಲ್ ಸಂಪರ್ಕಿಸುವ ಮುಖ್ಯ ರಸ್ತೆಯಿಂದ 200 ಮೀ ಅಂತರದಲ್ಲಿ ಬಿಲ್ಲೇಶ್ವರ ದೇವಸ್ಥಾನವಿದೆ. ಇದಕ್ಕೆ ಹೊಂದಿಕೊಂಡು ಹಾವಳಿ ಮಾರುತಿ ದೇವಸ್ಥಾನವಿದೆ. ಇಲ್ಲಿ ಮೂಲಸೌಕರ್ಯ ಒದಗಿಸಿ ಈ ಸ್ಥಳವನ್ನು ಪ್ರೇಕ್ಷಣೀಯ ಧಾರ್ಮಿಕ ಕೇಂದ್ರವನ್ನಾಗಿಸಬೇಕು’ ಎಂದು ಹಾನಗಲ್‌ ನಿವಾಸಿ ಸತೀಶ ಕುಲಕರ್ಣಿ ಒತ್ತಾಯಿಸುತ್ತಾರೆ.

ಸಂರಕ್ಷಿತ ಪ್ರದೇಶ ಎಂದು ಬಿಲ್ಲೇಶ್ವರ ದೇವಸ್ಥಾನ ಅಂಗಳದಲ್ಲಿ ಫಲಕ ಇದೆ. ಆದರೆ ಸಂರಕ್ಷಣೆಗೆ ಯಾವುದೇ ಕ್ರಮ ಆಗುತ್ತಿಲ್ಲ. ಪುರಸಭೆಯಿಂದ ಇಲ್ಲಿ ಹೈಮಾಸ್ಟ್‌ ವಿದ್ಯುತ್‌ ದೀಪ ಅಳವಡಿಸಬೇಕು. ಅಭಿವೃದ್ಧಿ ದೃಷ್ಟಿಯಿಂದ ಪ್ರಾಚ್ಯವಸ್ತು ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಬೇಕು ಎಂದು ಕಿರಣ ಮೂಡ್ಲಿಯವರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.