ADVERTISEMENT

ಕುಟುಂಬ ಸಂಘಟನೆ ಬದಲು ಪಕ್ಷ ಸಂಘಟನೆ ಮಾಡಲಿ: ವಿಜಯೇಂದ್ರ ವಿರುದ್ಧ ಯತ್ನಾಳ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 13:07 IST
Last Updated 4 ಸೆಪ್ಟೆಂಬರ್ 2021, 13:07 IST
ಬಸನಗೌಡ ಪಾಟೀಲ ಯತ್ನಾಳ, ಶಾಸಕ
ಬಸನಗೌಡ ಪಾಟೀಲ ಯತ್ನಾಳ, ಶಾಸಕ   

ಹಾವೇರಿ: ‘ಪಕ್ಷ ಸಂಘಟನೆಗೆ ಬಿ.ವೈ. ವಿಜಯೇಂದ್ರ ರಾಜ್ಯ ಪ್ರವಾಸ ಮಾಡಲಿ, ಆದರೆ ತಮ್ಮ ಪ್ರಾಬಲ್ಯ ಹೆಚ್ಚಿಸೋಕೆ ಪ್ರವಾಸ ಮಾಡೋದು ಬೇಡ. ಕುಟುಂಬ ಸಂಘಟನೆ ಬದಲು ಪಕ್ಷ ಸಂಘಟನೆಯೇ ಧ್ಯೇಯವಾಗಿರಲಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮಾಧಾನ ಹೊರಹಾಕಿದರು.

ಹಾನಗಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಪಂಚಮಸಾಲಿ ಸಮಾಜದ ‘ಪ್ರತಿಜ್ಞಾ ಪಂಚಾಯತ್‌’ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕೇಂದ್ರ ಗೃಹ ಮಂತ್ರಿ ಅಮಿತ್‌ಶಾ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧ. ಯಾರೇ ಮುಖ್ಯಮಂತ್ರಿ ಇದ್ದರೂ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗೋದು ಸಹಜ ಎಂದು ಬೊಮ್ಮಾಯಿ ನೇತೃತ್ವದ ಚುನಾವಣೆಗೆ ಸಹಮತ ವ್ಯಕ್ತಪಡಿಸಿದರು.

ADVERTISEMENT

ಪಂಚಮಸಾಲಿ ಹೋರಾಟದಲ್ಲಿ ಕೊಲೆ ಆರೋಪಿ ವಿನಯ ಕುಲಕರ್ಣಿ ಭಾಗವಹಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ವಿನಯ ಕುಲಕರ್ಣಿ ಆರೋಪ ಸಾಬೀತುವಾಗುವವರೆಗೆ ಅಪರಾಧಿಯಲ್ಲ. ಸಮುದಾಯದ ಸಲುವಾಗಿ ಬಂದಿದ್ದಾರೆ. ಜೈಲಲ್ಲಿ ಇದ್ದವರೇ ಮುಖ್ಯಮಂತ್ರಿ ಆಗಿದ್ರಲ್ಲಾ... ಎಂದು ಹೇಳುವ ಮೂಲಕ ಬಿ.ಎಸ್‌.ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಸೆಪ್ಟೆಂಬರ್‌ವರೆಗೆ ನಮಗೆ ನೀಡಿದ ಕಾಲಾವಕಾಶ ಮುಗಿಯುತ್ತಿದೆ. ಸಿಎಂ ಜತೆ ಮಾತುಕತೆ ಮಾಡಲಾಗಿದೆ. ಅಕ್ಟೋಬರ್‌ 1ರ ನಂತರ ಸರ್ಕಾರದ ಭರವಸೆ ಈಡೇರುವ ನಿರೀಕ್ಷೆಯಿದೆ. ವಿಳಂಬವಾದರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.