ADVERTISEMENT

ರಾಣೆಬೆನ್ನೂರು: ಬಿಜೆಪಿ–ಕಾಂಗ್ರೆಸ್‌ ಸಮಬಲ ಸಾಧನೆ

ರಾಣೆಬೆನ್ನೂರು ತಾಲ್ಲೂಕು 6 ಗ್ರಾಮ ಪಂಚಾಯ್ತಿಗಳ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 15:26 IST
Last Updated 31 ಮಾರ್ಚ್ 2021, 15:26 IST
ರಾಣೆಬೆನ್ನೂರಿನಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶ ಘೋಷಣೆಯಾದ ಹಿನ್ನೆಲೆಯಲ್ಲಿ ನಂದೀಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರು ವಿಜಯೋತ್ಸವ ಆಚರಿಸಿದರು
ರಾಣೆಬೆನ್ನೂರಿನಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶ ಘೋಷಣೆಯಾದ ಹಿನ್ನೆಲೆಯಲ್ಲಿ ನಂದೀಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರು ವಿಜಯೋತ್ಸವ ಆಚರಿಸಿದರು   

ರಾಣೆಬೆನ್ನೂರು: ನಗರದ ಹೊರೊವಲಯದಲ್ಲಿರುವ ರೋಟರಿ ಆಂಗ್ಲ ಮಾಧ್ಯಮ ಕಾಲೇಜು ಆವರಣದಲ್ಲಿ ಬುಧವಾರ ತಾಲ್ಲೂಕಿನ ಕುಪ್ಪೇಲೂರು, ಅಂತರವಳ್ಳಿ, ಮಾಳನಾಯಕನಹಳ್ಳಿ, ತುಮ್ಮಿನಕಟ್ಟಿ, ಜೋಯಿಸರಹರಳಹಳ್ಳಿ, ಸುಣಕಲ್ಲಬಿದರಿ ಸೇರಿದಂತೆ 6 ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶದ ಮತ ಎಣಿಕೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.

6 ಕ್ಷೇತ್ರಗಳ ಪೈಕಿ 3 ಪಂಚಾಯ್ತಿ ಬಿಜೆಪಿ ಮತ್ತು 3 ಕಡೆ ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಸಮಬಲದ ಸಾಧನೆ ಕಂಡು ಬಂದಿತು.

ಬೆಳಿಗ್ಗೆ ಚುನಾವಣೆ ಮತ ಎಣಿಕೆ ಮಂದಗತಿಯಲ್ಲಿ ಸಾಗಿತ್ತು. ಮಧ್ಯಾಹ್ನ ಚುರುಕುಗೊಂಡಿತು. ಫಲಿತಾಂಶ ಕೇಳಲು ಅಭಿಮಾನಿಗಳು ಸುಡು ಬಿಸಿಲು ಲೆಕ್ಕಿಸದೇ ಮತ ಎಣಿಕೆ ಕೇಂದ್ರದ ಸುತ್ತ ಕಾದು ಕುಳಿತಿದ್ದರು. ಒಂದೊಂದೆ ಫಲಿತಾಂಶ ಹೊರ ಬೀಳುತ್ತಲೇ ಸಿಳ್ಳೆ ಹಾಕಿ ಕೇಕಿ ಹೊಡೆದು ಸಂತೋಷ ವ್ಯಕ್ತಪಡಿಸಿದರು.

ADVERTISEMENT

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಅಂತರವಳ್ಳಿ, ಮಾಳನಾಯಕನಹಳ್ಳಿ ಹಾಗೂ ಕುಪ್ಪೇಲೂರು ಗ್ರಾಮ ಪಂಚಾಯ್ತಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಬ್ಯಾಡಗಿ ಮತ ಕ್ಷೇತ್ರದ ವ್ಯಾಪ್ತಿಯ ಜೋಯಿಸರಹರಳಹಳ್ಳಿ, ಸುಣಕಲ್ಲಬಿದರಿ ಹಾಗೂ ರಾಣೆಬೆನ್ನೂರು ವಿಧಾನ ಸಭಾ ಕ್ಷೇತ್ರದ ತುಮ್ಮಿನಕಟ್ಟಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.

ತುಮ್ಮಿನಕಟ್ಟಿ ಗ್ರಾಮ ಪಂಚಾಯ್ತಿಯಲ್ಲಿ 7 ಕಾಂಗ್ರೆಸ್‌ ಬೆಂಬಲಿತ, ಬಿಜೆಪಿ ಬೆಂಬಲಿತ 9 ಹಾಗೂ 3 ಪಕ್ಷೇತರರು ಆಯ್ಕೆಯಾಗಿದ್ದಾರೆ. ಇಲ್ಲಿ ಬಿಜೆಪಿ ಪಕ್ಷದ ಮುಖಂಡರ ಆಂತರಿಕ ಕಚ್ಚಾಟದಿಂದ ಬಿಜೆಪಿಗೆ ಸ್ವಲ್ಪ ಹಿನ್ನಡೆಯಾಗಿದ್ದು, ಪಂಚಾಯ್ತಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಪಕ್ಷೇತರರೇ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಕುಪ್ಪೇಲೂರು ಗ್ರಾಮ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತ 2 ಹಾಗೂ ಕಾಂಗ್ರೆಸ್‌‌ ಬೆಂಬಲಿತ 8 ಸದಸ್ಯರು ಹಾಗೂ ಮಾಳನಾಯಕನಹಳ್ಳಿಯಲ್ಲಿ 8 ಕಾಂಗ್ರೆಸ್‌ ಮತ್ತು 7 ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕೇಲಗಾರ, ಶಿವಕುಮಾರ ಮುದ್ದಪ್ಪಳವರ, ರಾಜಪ್ಪ ದಾವಣಗೆರೆ ಹಾಗೂ ಕಾಂಗ್ರೆಸ್‌ ಪಕ್ಷದ ಮಂಜನಗೌಡ ಪಾಟೀಲ, ಕೃಷ್ಣಪ್ಪ ಕಂಬಳಿ, ಯಲ್ಲಪ್ಪರಡ್ಡಿ, ತಿರುಪತಿ ಅಜ್ಜನವರ, ಮಧು ಕೋಳಿವಾಡ, ವೆಂಕಟೇಶ ಬಣಕಾರ, ಸೀತಾರಾಮರಡ್ಡಿ, ಸುರೇಶ ಭಾನುವಳ್ಳಿ, ಗದಿಗೆಪ್ಪ ಬೀರಣ್ಣನವರ, ಯಶೋಧಾ ಗಂಜಾಮದ, ಚಂದ್ರಪ್ಪ ತೋಟಗಂಟಿ, ವಿಶ್ವನಾಥ ತಡಕನಹಳ್ಳಿ ಇದ್ದರು.

ತಹಶೀಲ್ದಾರ್‌ ಶಂಕರ ಜಿ.ಎಸ್‌, ಉಪತಹಶೀಲ್ದಾರ್‌ ಮಂಜುನಾಥ ಹಾದಿಮನಿ, ಜಿ.ಎಸ್‌.ಶೆಟ್ಟರ, ಡಿವೈಎಸ್ಪಿ ಟಿ.ವಿ.ಸುರೇಶ ಹಾಗೂ ನಗರ ಠಾಣೆ ಸಿಪಿಐ ಎಂ.ವೈ. ಗೌಡಪ್ಪಗೌಡ ಹಾಗೂ ಭಾಗ್ಯವತಿ ಗಂತಿ ಬಿಗಿ ಬಂದೋಬಸ್ತ್‌ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.