
ರಾಣೆಬೆನ್ನೂರು: ಬಿಜೆಪಿ ಕಚೇರಿಗೆ ನೀಡಿದ ಜಾಗದ ಕುರಿತು ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಸಾಮಾನ್ಯ ಸಭೆಗೆ ಗೈರಾಗಿದ್ದರು. ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿತ್ತು.
ಈಗ ಸಾಮಾನ್ಯ ಸಭೆಯನ್ನು ಅ.28ರಂದು ನಿಗದಿ ಮಾಡಲಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ವಾಣಿಜ್ಯ ನಗರಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಪ್ರಸಿದ್ದಿ ಪಡೆದಿರುವ ನಗರಸಭೆಯ 10ನೇ ಅವಧಿಯ 4ನೇ ಸಾಧಾರಣ ಸಭೆಯು ಅ.18 ರಂದು ನಡೆದಾಗ ಬಿಜೆಪಿ ಕಚೇರಿ ಜಾಗೆಯ ವಿಷಯವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಂದ ನೋಟಿಸ್ ಬಂದಿದ್ದರಿಂದ ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಸಭೆಯಿಂದ ದೂರ ಉಳಿದಿದ್ದರು.
ಈಗ ಮತ್ತೆ ಅಧ್ಯಕ್ಷೆ ಚಂಪಕಾ ಬಿಸಲಹಳ್ಳಿ ಅವರು ಅನಿರ್ಧಿಷ್ಟ ಅವಧಿಗೆ ಮುಂದೂಡಿದ ಸಭೆಯನ್ನು ಅ.28 ರಂದು 11 ಗಂಟೆಗೆ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮತ್ತೆ ಸಾಮಾನ್ಯ ಸಭೆ ಕರೆದಿದ್ದಾರೆ. ಬಿಜೆಪಿ ಸದಸ್ಯರು ಎಷ್ಟರ ಮಟ್ಟಿಗೆ ಸಭೆಗೆ ಹಾಜರಾಗುತ್ತಾರೆ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.
ಇನ್ನೇನು ಇವರ ಅವಧಿಯೂ ಕೂಡ ಅ.30ಕ್ಕೆ ಮುಗಿಯಲಿದೆ. ಬಿಜೆಪಿ ಸದಸ್ಯರು ಹಾಜರಾಗುತ್ತಾರೆ ಇಲ್ಲವೋ ತಿಳಿಯದಾಗಿದೆ. ನಗರದ ಅನೇಕ ಸಮಸ್ಯೆಗಳು ಹಾಗೆ ಉಳಿದಿವೆ. ನಗರದ ರಸ್ತೆಗಳು ಹದಗೆಟ್ಟು ಗುಂಡಿಮಯವಾಗಿದೆ.
ಅನೇಕ ಸಂಘಟನೆಗಳು ಮಾಗೋಡ ವೃತ್ತದಿಂದ ಹಿಡಿದು ಜಾನುವಾರು ಮಾರುಕಟ್ಟೆಯವರೆಗೂ ಮತ್ತು ನಗರದ ಪ್ರಮುಖ ವೃತ್ತಗಳಿಗೆ ಕೆಲ ಮಹಾನ್ ನಾಯಕರ ಹೆಸರಿನ ನಾಮಫಲಕ ಅಳವಡಿಸಿದ್ದಾರೆ. ಕೆಲ ಕಡೆ ಸುಣ್ಣ ಬಣ್ಣ ಬಳಿದು ಅಲಂಕಾರ ಕೂಡ ಮಾಡಿದ್ದಾರೆ. ಇದು ಇಂದಿನ ಸಭೆಯಲ್ಲಿ ಏನಾಗುತ್ತದೇ ಎಂಬುದರ ಬಗ್ಗೆ ವಿವಿಧ ಸಮುದಾಯ ಮತ್ತು ಕನ್ನಡ ಪರ ಸಂಘಟನೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಆತಂಕ ಉಂಟಾಗಿದೆ. ಇದಕ್ಕೆಲ್ಲ ಮಂಗಳವಾರ ನಡೆಯುವ ಸಭೆಯಲ್ಲಿ ತೆರೆ ಬೀಳಲಿದೆ ಎಂದು ಕಾದು ನೋಡಬೇಕಾಗಿದೆ.
ಕಳೆದ ಸಭೆಗೆ ಆವ್ಹಾನಿಸಿದಾಗಲೂ 35 ಸದಸ್ಯರ ಪೈಕಿ 7 ಸದಸ್ಯರು ಮಾತ್ರ ಹಾಜರಾಗಿದ್ದರು. ಮತ್ತೆ ಕೋರಂ ಭರ್ತಿಯಾಗದ ಕಾರಣ ಸಭೆಯನ್ನು ಅನಿರ್ಧಿಷ್ಟ ಅವಧಿಯವರೆಗೆ ಮುಂದೂಡಿದ್ದರು.
ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ನಗರದ ಅಭಿವೃದ್ಧಿ ಹಿತದೃಷ್ಠಿಯಿಂದ ಕಾಂಗ್ರೆಸ್ ಜೊತೆಗೆ ಬಿಜೆಪಿ ಮತ್ತು ಪಕ್ಷೇತರ ಸದಸ್ಯರ ಬೆಂಬಲ ಪಡೆದು ಆಡಳಿತದ ಚುಕ್ಕಾಣಿ ಹಿಡಿಯಲಾಗಿತ್ತು. ಅ.18ರ ಸಭೆಗೆ ಬಿಜೆಪಿ ಸದಸ್ಯರು ಗೈರು ಹಾಜರಾಗಿದ್ದಕ್ಕೆ ನಗರದ ಅಭಿವೃದ್ಧಿ ಮತ್ತು ಪ್ರಮುಖ ವೃತ್ತಗಳಿಗೆ ಮಹಾನಾಯಕರ ನಾಮಕರಣ ಮಾಡುವುದು ಬಿಜೆಪಿ ಸದಸ್ಯರಿಗೆ ಬೇಕಾಗಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್ ಸದಸ್ಯರದ್ದಾಗಿತ್ತು.
ಈಗ ಶಾಸಕ ಪ್ರಕಾಶ ಕೋಳಿವಾಡ ಅವರು ಬಿಜೆಪಿ ಕಚೇರಿ ಜಾಗೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮತ್ತು ಬಿಜೆಪಿ ಮುಖಂಡರು ಮತ್ತು ಸದಸ್ಯರೊಂದಿಗೆ ಚರ್ಚಿಸಿ ಸ್ಪಷ್ಟತೆ ನೀಡಿ, ನಗರದ ಅಭಿವೃದ್ಧಿ ದೃಷ್ಠಿಯಿಂದ ಸಭೆಗೆ ಎಲ್ಲ ಸದಸ್ಯರು ಹಾಜರಾಗಬೇಕು ಎಂದು ಮನವಿ ಮಾಡಿದ್ದಾರೆ. ಹಾಗಾಗಿ ಈಗ ಅ.28 ರಂದು ಕರೆದಿರುವ ಸಭೆಗೆ ಎಲ್ಲ ಸದಸ್ಯರು ಹಾಜರಾಗಲಿದ್ದಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.
ಮಂಗಳವಾರ ನಡೆಯುವ ಸಭೆಗೆ 84 ವಿಷಯಗಳನ್ನು ತೆಗೆದುಕೊಂಡಿದ್ದು, ಎಲ್ಲ ವಾರ್ಡುಗಳಿಗೆ ಸಮನಾಗಿ ₹ 25 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಅಧ್ಯಕ್ಷರ ಅಪ್ಪಣೆ ಮೇರೆಗೆ ಬಂದ ವಿಷಯಗಳನ್ನು ಕೂಡ ಇದೇ ಸಂದರ್ಭದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು. ಮಂಗಳವಾರ ನಡೆಯುವ ಸಭೆಯಲ್ಲಿ ಎಲ್ಲ ವಿಷಯಗಳು ಎಲ್ಲ ಸದಸ್ಯರ ಸರ್ವಾನುಮತದಿಂದ ಪಾಸಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಕಚೇರಿ ಜಾಗೆಯ ವಿಷಯವನ್ನು ಕೂಡ ಸಭೆಗೆ ತೆಗೆದುಕೊಂಡಿದ್ದು ಇಂದಿನ ಸಭೆಗೆ ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಸಭೆಗೆ ಹಾಜರಾಗಲಿದ್ದಾರೆಚಂಪಕ ಬಿಲಸಹಳ್ಳಿ ನಗರಸಭೆ ಅಧ್ಯಕ್ಷೆ
ಬಿಜೆಪಿ ಕಚೇರಿ ಜಾಗೆ ಕುರಿತು ನೋಟಿಸ್ ನೀಡಿದ ವಿಷಯಕ್ಕೆ ಹಿಂದಿನ ಸಭೆಗೆ ಗೈರು ಹಾಜರಾಗಿದ್ದೆವು. ಈ ಬಗ್ಗೆ ಸ್ಪಷ್ಟ ನಿಲುವು ಸಿಕ್ಕಿದೆ. ಮಂಗಳವಾರ ನಡೆಯುವ ಸಭೆಗೆ ಬಿಜೆಪಿ ಸದಸ್ಯರು ಭಾಗವಹಿಸುತ್ತೇವೆಪ್ರಕಾಶ ಬುರಡೀಕಟ್ಟಿ. ಬಿಜೆಪಿ ಬೆಂಬಲಿತ ಸದಸ್ಯ
ಶರಣರ ಹೆಸರಿಡಲು ಒಪ್ಪಿಗೆ
‘ಬಿಜೆಪಿ ಕಚೇರಿ ಜಾಗ ಕುರಿತು ಮಂಗಳವಾರ ನಡೆಯುವ ಸಭೆಯಲ್ಲಿ ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವ ವಿಷಯದಲ್ಲಿ ತೆಗೆದುಕೊಂಡು ಠರಾವು ಪಾಸು ಮಾಡಲು ಒಪ್ಪಿಗೆ ನೀಡಿದ್ದು ನಮ್ಮ ಎಲ್ಲ ಸದಸ್ಯರು ಸಭೆಗೆ ಹಾಜರಾಗುತ್ತಾರೆ’ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಸ್ಪಷ್ಟಪಡಿಸಿದರು. ‘ನಗರದ ಎಲ್ಲ ವೃತ್ತಗಳಿಗೆ ಮಹಾನ್ ನಾಯಕರ ಶರಣರ ಹೆಸರಿನ್ನಡಲು ನಮ್ಮ ಒಪ್ಪಿಗೆ ಇದೆ. ಇದಕ್ಕೆ ಬಿಜೆಪಿ ಸದಸ್ಯರು ಸರ್ವಾನುಮತದಿಂದ ಬೆಂಬಲ ಸೂಚಿಸಲಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.