ಹಾವೇರಿ: ‘ನಗರ ಸೇರಿದಂತೆ ರಾಜ್ಯದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದು, ಜನಸಾಮಾನ್ಯರು ಪರದಾಡುತ್ತಿದ್ದಾರೆ. ಗುಂಡಿ ಮುಚ್ಚಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಿ.ಎಚ್. ಪಟೇಲ್ ವೃತ್ತದಲ್ಲಿ ಸೇರಿದ್ದ ಪ್ರತಿಭಟನಕಾರರು, ವೃತ್ತದಲ್ಲಿ ಹೆಚ್ಚಾಗಿದ್ದ ಗುಂಡಿಗಳನ್ನು ಮುಚ್ಚಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಸಲಕರಣೆ ಸಮೇತ ಸ್ಥಳಕ್ಕೆ ಬಂದಿದ್ದ ಪ್ರತಿಭಟನಕಾರರು, ಗುಂಡಿಗಳಿರುವ ಜಾಗದಲ್ಲಿ ಜಲ್ಲಿಕಲ್ಲು ಹಾಕಿ ಸಮತಟ್ಟಾಗಿ ಮಾಡಿದರು. ನಂತರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
‘ರಾಜ್ಯದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದಾಗಿ ಜನರ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆ ಗುಂಡಿಯಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದು, ಜನರು ಗಾಯಗೊಳ್ಳುತ್ತಿದ್ದಾರೆ. ಇಂಥ ಅಪಘಾತದಲ್ಲಿ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ’ ಎಂದು ಪ್ರತಿಭಟನಕಾರರು ಹೇಳಿದರು.
‘ಹಾವೇರಿ ನಗರ ಹಾಗೂ ಜಿಲ್ಲೆಯಲ್ಲಿಯೂ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಪ್ರಮುಖ ರಸ್ತೆಗಳು ಹಾಗೂ ಒಳ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಗ್ಯಾರಂಟಿ ಯೋಜನೆಗಳ ಜಪ ಮಾಡುತ್ತಿರುವ ರಾಜ್ಯ ಸರ್ಕಾರ, ಗುಂಡಿ ಮುಚ್ಚಿಸಲು ಹಿಂದೇಟು ಹಾಕುತ್ತಿದೆ. ಇದೇ ಕಾರಣಕ್ಕೆ, ಜನರು ರಾಜ್ಯ ಸರ್ಕರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇಂಥ ರಾಜ್ಯ ಸರ್ಕಾರಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಪ್ರತಿಭಟನಕಾರರು ತಿಳಿಸಿದರು.
‘ದೊಡ್ಡ ಅನಾಹುತಗಳು ಸಂಭವಿಸುವ ಮುನ್ನವೇ, ನಗರ ಹಾಗೂ ಜಿಲ್ಲೆಯ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಗುಂಡಿಗಳನ್ನು ಮುಚ್ಚಿಸಿ, ಜನರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು’ ಎಂದೂ ಆಗ್ರಹಿಸಿದರು.
ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ, ಸಿದ್ದರಾಜ ಕಲಕೋಟಿ ಹಾಗೂ ಇತರರು ಇದ್ದರು.
‘15 ದಿನ ಗಡುಗು’
‘ರಾಜ್ಯದ ರಸ್ತೆಗಳಲ್ಲಿ ಹೆಚ್ಚಾಗಿರುವ ಗುಂಡಿಗಳನ್ನು ಮುಚ್ಚಲು ಆಗ್ರಹಿಸಿ ಬಿಜೆಪಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಮುಂದಿನ 15 ದಿನದೊಳಗೆ ಎಲ್ಲ ಗುಂಡಿಗಳನ್ನು ಮುಚ್ಚಿಸಬೇಕು. ಇಲ್ಲದಿದ್ದರೆ ರಸ್ತೆಗಳಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು’ ಎಂದು ಮುಖಂಡ ಸಿದ್ದರಾಜ ಕಲಕೋಟಿ ಎಚ್ಚರಿಸಿದರು. ‘ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳಲ್ಲಿಯೂ ಗುಂಡಿಗಳು ಹೆಚ್ಚಾಗಿವೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಒಂದೂ ಹೊಸ ರಸ್ತೆ ಮಾಡಿಲ್ಲ. ಗುಂಡಿಯನ್ನೂ ಮುಚ್ಚುತ್ತಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.