ಹಾವೇರಿ: ‘ಅಣ್ಣಪ್ಪಸ್ವಾಮಿ ಹಾಗೂ ಮಂಜುನಾಥಸ್ವಾಮಿ ನೆಲೆಸಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರನ್ನು ಬಂಧಿಸಿ, ಶಿಕ್ಷಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ‘ಧರ್ಮದ ಉಳಿವಿಗಾಗಿ ಧರ್ಮಯುದ್ಧ’ ಹೆಸರಿನಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡುತ್ತಿರುವವರ ವಿರುದ್ಧ ಘೋಷಣೆ ಕೂಗಿದರು.
‘ಶ್ರೀಕ್ಷೇತ್ರದ ವಿರುದ್ಧ ಎಡಪಂಥೀಯರ ಹುನ್ನಾರ; ಮಾಡುವೆವು ಷಡ್ಯಂತ್ರದ ಸಂಹಾರ’, ‘ಎಡಪಂಥೀಯರ ಷಡ್ಯಂತ್ರ ಬಯಲಿಗೆಳೆಯೋಣ, ಧರ್ಮಸ್ಥಳ ಕ್ಷೇತ್ರ ರಕ್ಷಿಸೋಣ’, ‘ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ಬಂಧನ ಯಾವಾಗ?’, ‘ಷಡ್ಯಂತ್ರಕ್ಕೆ ಸೋಲು ಗ್ಯಾರಂಟಿ, ಧರ್ಮದ ಹೋರಾಟಕ್ಕೆ ಗೆಲುವು ಶತಸಿದ್ಧ’ ಘೋಷಣೆಯ ಫಲಕಗಳನ್ನು ಪ್ರದರ್ಶಿಸಿದರು.
ಮೆರವಣಿಗೆ ನಂತರ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೇರಿದ್ದ ಪ್ರತಿಭಟನಾಕಾರರು, ಬಹಿರಂಗ ಸಭೆ ನಡೆಸಿ ಆಕ್ರೋಶ ಹೊರಹಾಕಿದರು.
‘ಹಿಂದೂಗಳ ಪವಿತ್ರ ಸ್ಥಳವಾದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ಎಡಪಂಥೀಯರು ಹುನ್ನಾರ ನಡೆಸುತ್ತಿದ್ದಾರೆ. ಎಡಪಂಥೀಯರ ಷಡ್ಯಂತ್ರವನ್ನು ಮಟ್ಟಹಾಕಬೇಕಾದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಅವರ ಪರವೇ ನಿಂತಿದೆ. ಇದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ’ ಎಂದು ಪ್ರತಿಭಟನಕಾರರು ದೂರಿದರು.
‘ಧರ್ಮಸ್ಥಳವು ಕೇವಲ ಧರ್ಮ ಕ್ಷೇತ್ರವಾಗಿಲ್ಲ. ಹಿಂದೂಗಳ ಆರಾಧ್ಯ ದೈವ ಅಣ್ಣಪ್ಪಸ್ವಾಮಿ ಹಾಗೂ ಮಂಜುನಾಥಸ್ವಾಮಿ ನೆಲೆಸಿರುವ ಕ್ಷೇತ್ರವಾಗಿದೆ. ಮಹಿಳಾ ಸಬಲೀಕರಣ, ಕೆರೆಗಳ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರ, ಶಿಕ್ಷಣ, ವೈದ್ಯಕೀಯ ಹಾಗೂ ಇತರೆ ಕ್ಷೇತ್ರಗಳಲ್ಲಿಯೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಶ್ರಮಿಸುತ್ತಿದ್ದಾರೆ. ಅವರಿಂದಾಗಿ ಸಾವಿರಾರು ಕೆರೆಗಳ ಅಭಿವೃದ್ಧಿಯಾಗಿದೆ. ಹಳೇ ದೇವಸ್ಥಾನಗಳು ಜೀರ್ಣೋದ್ಧಾರಗೊಂಡಿವೆ’ ತಿಳಿಸಿದರು.
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಷಡ್ಯಂತ್ರಗಳು ಹೆಚ್ಚಾಗಿ ನಡೆಯುತ್ತಿವೆ. ದಕ್ಷಿಣ ಭಾರತದ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಜೈನ ಸಮುದಾಯದ ಧರ್ಮಾಧಿಕಾರಿಯನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ’ ಎಂದರು.
‘ಮುಸುಕುಧಾರಿ ಹಾಗೂ ಆತನ ಜೊತೆಗಿರುವ ಎಲ್ಲರನ್ನೂ ಬಂಧಿಸಿದರೆ, ಷಡ್ಯಂತ್ರದ ಸತ್ಯಾಂಶ ಹೊರಬೀಳಲಿದೆ. ಅಪಪ್ರಚಾರ ಮಾಡುವ ಯೂಟ್ಯೂಬರ್ ಹಾಗೂ ಸಾಮಾಜಿಕ ಮಾಧ್ಯಮದ ಪ್ರಭಾವಿಗಳಿಗೆ ಯಾವುದೋ ಸಮುದಾಯದಿಂದ ಹಣ ಬರುತ್ತಿರುವ ಸಂಶಯವಿದ್ದು, ಈ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಶೋಭಾ ನಿಸ್ಸೀನಗೌಡರ, ಸಂತೋಷ ಆಲದಕಟ್ಟಿ, ಸಿದ್ದರಾಜ ಕಲಕೋಟಿ, ಬಸವರಾಜ ಕಳಸೂರ, ನಂಜುಂಡೇಶ ಕಳ್ಳೆರ, ಗವಿಸಿದ್ದಪ್ಪ ದ್ಯಾಮಣ್ಣನವರ, ಪರಮೇಶ್ವರಪ್ಪ ಮೇಗಿಲಮನಿ ಇದ್ದರು.
3 ಕ್ಷೇತ್ರದಲ್ಲಿ ಪ್ರತಿಭಟನೆ 25ರಂದು
‘ಹಾವೇರಿ ಹಾನಗಲ್ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಗಿದೆ. ಆಗಸ್ಟ್ 25ರಂದು ಶಿಗ್ಗಾವಿ ರಾಣೆಬೆನ್ನೂರು ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದವರನ್ನು ಬಂಧಿಸಿ ಶಿಕ್ಷಿಸಬೇಕು. ಇಲ್ಲದಿದ್ದರೆ ಗಂಭೀರ ಸ್ವರೂಪದ ಹೋರಾಟ ಆರಂಭಿಸಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.
‘ಮುಖ್ಯಮಂತ್ರಿ ಗೃಹ ಸಚಿವರಿಗೆ ವಿವೇಚನೆ ಇದ್ದರೆ ಪ್ರಕರಣವನ್ನು ಎಸ್‌ಐಟಿ ಬದಲಿಗೆ ಎನ್‌ಐಎ ತನಿಖೆಗೆ ವಹಿಸಬೇಕು. ಷಡ್ಯಂತ್ರ ನಡೆಸಿರುವ ಮುಸುಕುಧಾರಿ ಹಾಗೂ ಎಲ್ಲರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.