ADVERTISEMENT

ಹಾವೇರಿಯಲ್ಲಿ ಬಿಜೆಪಿ ಸಂಕಲ್ಪ ಸಭೆ: ವಿಭಜಿತರಿಂದ ಭಾರತ್‌ ಜೋಡೊ– ಕಟೀಲ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 13:59 IST
Last Updated 11 ಅಕ್ಟೋಬರ್ 2022, 13:59 IST
ಹಾವೇರಿ ನಗರದಲ್ಲಿ ಮಂಗಳವಾರ ಹಾವೇರಿ ವಿಧಾನಸಭಾ ಕ್ಷೇತ್ರದ ಪೇಜ್‌ ಪ್ರಮುಖರು ಹಾಗೂ ಮೇಲ್ಪಟ್ಟ ಪದಾಧಿಕಾರಿ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಉದ್ಘಾಟಿಸಿದರು. ಶಾಸಕ ನೆಹರು ಓಲೇಕಾರ, ಸಂಸದ ಶಿವಕುಮಾರ ಉದಾಸಿ ಇದ್ದಾರೆ  –ಪ್ರಜಾವಾಣಿ ಚಿತ್ರ
ಹಾವೇರಿ ನಗರದಲ್ಲಿ ಮಂಗಳವಾರ ಹಾವೇರಿ ವಿಧಾನಸಭಾ ಕ್ಷೇತ್ರದ ಪೇಜ್‌ ಪ್ರಮುಖರು ಹಾಗೂ ಮೇಲ್ಪಟ್ಟ ಪದಾಧಿಕಾರಿ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಉದ್ಘಾಟಿಸಿದರು. ಶಾಸಕ ನೆಹರು ಓಲೇಕಾರ, ಸಂಸದ ಶಿವಕುಮಾರ ಉದಾಸಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಹಾವೇರಿ: ‘ಕಾಂಗ್ರೆಸ್‌ನವರು ಮತಬ್ಯಾಂಕಿಗಾಗಿ ಹಿಂದೂ–ಮುಸ್ಲಿಮರನ್ನು ಒಡೆದರು, ವಂದೇಮಾತರಂ ಮತ್ತು ರಾಷ್ಟ್ರಗೀತೆಯನ್ನು ತುಂಡರಿಸಿದರು, ದೇಶವನ್ನು ವಿಭಜನೆ ಮಾಡಿದರು. ದೇಶ, ಭಾಷೆ, ಧರ್ಮ, ಜಾತಿ, ಮತ ಎಲ್ಲವನ್ನೂ ವಿಭಜನೆ ಮಾಡಿದ ಕಾಂಗ್ರೆಸ್‌ ಇಂದು ‘ಭಾರತ್‌ ಜೋಡೊ’ ಯಾತ್ರೆ ಮಾಡುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ವ್ಯಂಗ್ಯವಾಡಿದರು.

ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಹಾವೇರಿ ವಿಧಾನಸಭಾ ಕ್ಷೇತ್ರದ ಪೇಜ್‌ ಪ್ರಮುಖರು ಹಾಗೂ ಮೇಲ್ಪಟ್ಟ ಪದಾಧಿಕಾರಿ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ದೇಶದಲ್ಲಿ ಚತುಷ್ಪಥ ಹೆದ್ದಾರಿಗಳನ್ನು ನಿರ್ಮಿಸುವ ಮೂಲಕ ನಿಜವಾದ ‘ಭಾರತ್‌ ಜೋಡೊ’ ಮಾಡಿದರು. 370ನೇ ವಿಧಿಯನ್ನು ರದ್ದತಿ ಮಾಡಿ ಕಾಶ್ಮೀರವನ್ನು ಭಾರತಕ್ಕೆ ಉಳಿಸಿದ್ದು ನರೇಂದ್ರ ಮೋದಿ ಸರ್ಕಾರ. ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಮಾಡಿ ಹಿಂದೂ–ಮುಸ್ಲಿಮರ ಏಕತೆ ಹಾಳು ಮಾಡಿದರು. ಅಷ್ಟೇ ಅಲ್ಲ, ವೀರೈಶವ ಲಿಂಗಾಯತ ಸಮಾಜವನ್ನು ಒಡೆದರು ಎಂದು ಆರೋಪಿಸಿದರು.

ADVERTISEMENT

ಕಾಂಗ್ರೆಸ್‌ನ 3 ಕೊಡುಗೆಗಳು

ಕಾಂಗ್ರೆಸ್‌ ಈ ದೇಶಕ್ಕೆ ಭ್ರಷ್ಟಾಚಾರ, ಪರಿವಾರವಾದ ಮತ್ತು ಭಯೋತ್ಪಾದನೆಗೆ ಪ್ರೇರಣಿ ಎಂಬ ಮೂರು ಕೊಡುಗೆಗಳನ್ನು ಕೊಟ್ಟಿದೆ. ‘ಭ್ರಷ್ಟಾಚಾರದ ಪಿತಾಮಹ’ ಎನಿಸಿರುವ ಕಾಂಗ್ರೆಸ್‌ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ‘ಕಾಂಗ್ರೆಸ್‌ ಮುಕ್ತ ಭಾರತ’ ಮತ್ತು ‘ಕಾಂಗ್ರೆಸ್‌ ಮುಕ್ತ ಕರ್ನಾಟಕ’ವಾಗಲಿದೆ ಎಂದರು.

ಭಯೋತ್ಪಾದನಾ ಚಟುವಟಿಕೆ ಮತ್ತು ನಕ್ಸಲ್‌ ಚಳವಳಿ ತಲೆ ಎತ್ತಿದ್ದು ಕಾಂಗ್ರೆಸ್‌ ಆಳ್ವಿಕೆಯಲ್ಲಿ. ಮೋದಿ ಸರ್ಕಾರ ಬಂದ ನಂತರ ನಕ್ಸಲ್‌ ಚಳವಳಿ ನಿಲ್ಲಿಸಿದ್ದೇವೆ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಪಿಎಫ್‌ಐ ನಿಷೇಧಿಸಿದ್ದೇವೆ. ಬಾಂಬ್‌ ಸ್ಫೋಟಗಳು ನಿಂತುಹೋಗಿವೆ ಎಂದರು.

ನಕಲಿ ಕಾಂಗ್ರೆಸ್ಸಿಗರು

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೆಸರಿನಲ್ಲಿ, ಗಾಂಧಿ ಹೆಸರಿನಲ್ಲಿ 70 ವರ್ಷ ಕಾಂಗ್ರೆಸ್‌ ಅಧಿಕಾರ ನಡೆಸಿತು. ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್‌ ಇಂದು ಉಳಿದಿಲ್ಲ. ಇಂದು ಇರುವುದು ನಕಲಿ ಕಾಂಗ್ರೆಸ್ಸಿಗರು. ಮಹಾತ್ಮ ಗಾಂಧಿ ಮತ್ತು ರಾಹುಲ್‌ ಗಾಂಧಿಯವರಿಗೆ ಏನು ಸಂಬಂಧ?. ‘ಗರೀಬಿ ಹಠಾವೋ’ ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್‌ನಿಂದ ದೇಶದ ಬಡತನ ನಿವಾರಣೆಯಾಗಲಿಲ್ಲ. ಕೇವಲ ಗಾಂಧಿ ಕುಟುಂಬ, ಖರ್ಗೆ, ಸಿದ್ರಾಮಣ್ಣ, ಡಿಕೆಶಿ ಕುಟುಂಬಗಳ ಗರೀಬಿ ಹಠಾವೋ ಆಯಿತು ಅಷ್ಟೆ ಎಂದು ಕುಟುಕಿದರು.

ಕಾಂಗ್ರೆಸ್‌ ಶಾಸಕ ತನ್ವೀರ್‌ ಶೇಠ್‌ಗೆ ಪಿಎಫ್‌ಐನವರು ಚೂರಿ ಹಾಕಿದಾಗ, ಆರೋಪಿಗಳನ್ನು ಬಂಧಿಸಿ ಜೈಲಿನಲ್ಲಿಡುವ ತಾಕತ್ತು ಸಿದ್ದರಾಮಯ್ಯನವರಿಗೆ ಇರಲಿಲ್ಲ. ಧಮ್‌ ತೋರಿಸಿ ಎನ್ನುವ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಬಿಜೆಪಿ ಸರ್ಕಾರ ಪಿಎಫ್‌ಐ ನಿಷೇಧಿಸಿ, ಆರೋಪಿಗಳನ್ನು ಜೈಲಿಗಟ್ಟಿದೆ. ಮತಬ್ಯಾಂಕಿಗಾಗಿ ‘ತುಷ್ಟೀಕರಣದ ರಾಜನೀತಿ’ಯನ್ನು ಕಾಂಗ್ರೆಸ್‌ ಮಾಡಿತು. ರಾಷ್ಟ್ರೀಯ ಮುಸಲ್ಮಾನವಾದಕ್ಕೆ ನಾವು ಬೆಲೆ ಕೊಟ್ಟವರು. ಶ್ರೇಷ್ಠ ವಿಜ್ಞಾನಿ ಅಬ್ದುಲ್‌ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದವರು ನಾವು ಎಂದು ಹೇಳಿದರು.

‘ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ ಇಬ್ಭಾಗ’

ಕಾಂಗ್ರೆಸ್‌ನಿಂದ ‘ಭಾರತ್‌ ಜೋಡೊ’ ನಡೆಯುತ್ತಿದ್ದರೆ, ರಾಜ್ಯದಲ್ಲಿ ಅವರದೇ ಪಕ್ಷದಲ್ಲಿ ಒಳಜಗಳವೂ ಜೋರಾಗಿದೆ. ಚುನಾವಣೆಗೂ ಮುನ್ನವೇ ಸಿದ್ದು ಮತ್ತು ಡಿಕೆಶಿ ಎಂಬ ಎರಡು ಬಣಗಳು ಸೃಷ್ಟಿಯಾಗಿ, ಕಾಂಗ್ರೆಸ್‌ ಎರಡು ಹೋಳಾಗಲಿದೆ. 3ನೇ ಶಕ್ತಿಯೊಂದು ಸೃಷ್ಟಿಯಾಗುತ್ತಿದೆ ಅದು ಖರ್ಗೆ ಗ್ಯಾಂಗ್‌ ಎಂದರು.

ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ನಂತರ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ. ಏಕೆಂದರೆ, ಖರ್ಗೆಯವರು ಮುಖ್ಯಮಂತ್ರಿಯಾಗುವುದಕ್ಕೆ ಅಡ್ಡಗಾಲು ಹಾಕಿದವರು ಸಿದ್ದರಾಮಯ್ಯ. ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಖರ್ಗೆಯವರೇ ಸೋಲಿಸುತ್ತಾರೆ. ಚುನಾವಣೆಯ ನಂತರ ಸಿದ್ದರಾಮಯ್ಯ ಕಾಡಿಗೆ, ಡಿಕೆಶಿ ಬಂಡೆ ಒಡೆಯಲಿಕ್ಕೆ, ಬಿಜೆಪಿ ಅಧಿಕಾರಕ್ಕೆ ಎಂದು ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.