ಶಿಗ್ಗಾವಿ: ಅಪಘಾತ, ತೀವ್ರ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗೆ ರಕ್ತದಾನ ಮಾಡುವುದು ಸಂಜೀವಿನಿಗೆ ಸಮಾನ. ಹೀಗಾಗಿ ಪ್ರತಿಯೊಬ್ಬರು ಸ್ವಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಆರೋಗ್ಯಕರ ನಾಡು ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕಾಂಗ್ರೆಸ್ ಪಕ್ಷದ ತಾಲ್ಲೂಕು ಮುಖಂಡ ಎಂ.ಎಂ.ಪಠಾಣ ಹೇಳಿದರು.
ಪಟ್ಟಣದ ಗುಜರಾತಿ ಹಾಲ್ ದಲ್ಲಿ ಬುಧವಾರ ಯಾಸೀರ ಅಹ್ಮದಖಾನ್ ಪಠಾಣ ಅವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ, ಹಾವೇರಿ ವೈದ್ಯಕೀಯ ಕಾಲೇಜಿನ ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಸಹಯೋಗದಲ್ಲಿ ನಡೆದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲ ವಿತರಣೆ ಹಾಗೂ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರ, ಅಂತಸ್ತು ಹಾಗೂ ಸಂಪತ್ತು ಎಂದಿಗೂ ಶಾಶ್ವತವಲ್ಲ. ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಇತರರಿಗಾಗಿ ಮಾಡುವ ಪರೋಪಕಾರ, ದಾನಧರ್ಮದ ಕಾರ್ಯಗಳು ಶಾಶ್ವತವಾಗಿವೆ. ಹೀಗಾಗಿ ಜನಪರ ಆಶೋತ್ತರಗಳನ್ನು ಗುರುತಿ ಈಡೇರಿಸಬೇಕು. ಸಣ್ಣಪುಟ್ಟ ಕಾರ್ಯಗಳಿಗೆ ಅಲೆದಾಡುವ ಜನರಿಗೆ ನೆರವಾಗಬೇಕು. ಯುವಕರಿಗೆ ಉದ್ಯೋಗ ಕಲ್ಪಿಸುವುದು. ಗ್ರಾಮೀಣ ಪ್ರದೇಶದ ರಸ್ತೆ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ. ಅದರಿಂದ ಹಿಂದುಳಿದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತಿದೆ ಎಂದರು.
ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಮಾತನಾಡಿ, ರಕ್ತದ ಕೊರತೆ ಕಾಡುತ್ತಿದ್ದು, ಶಾಸಕರ ಜನ್ಮ ದಿನದ ಆಂಗವಾಗಿ ಅಭಿಮಾನಿಗಳು ರಕ್ತದಾನ ಮಾಡುವುದು ಉತ್ತಮ ಕಾರ್ಯವಾಗಿದೆ. ಅದರಿಂದ ಸಾಕಷ್ಟು ರೋಗಿಗಳಿಗೆ ಜೀವದಾನ ಮಾಡಿದಂತಾಗಿದೆ. ರಕ್ತದಾನ ಮಾಡುವ ವ್ಯಕ್ತ ಆರೋಗ್ಯ ಹೆಚ್ಚಿಸಲು ಕಾರಣವಾಗಿದೆ. ಭಯ ಬಿಟ್ಟು ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದರು.
ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಮಹೇಶ, ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಿಬ್ಬಂದಿ ಸಿದ್ದು ಹಿರಗಣ್ಣವರ, ಪುಷ್ಪಾವತಿ ಸಜ್ಜನವರ, ಪ್ರಶಾಂತ ಬಾರಕೇರಿ, ಸೌಭಾಗ್ಯವತಿ ದೊಡ್ಡಮನಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ಮುಲ್ಲಾ, ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ತಾಲ್ಲೂಕು ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಸವಣೂರ ತಾಲ್ಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಪುರಸಭೆ ಸದಸ್ಯ ಗೌಸಖಾನ್ ಪಠಾಣ, ಮಹಾಂತೇಶ ಸಾಲಿ, ಮುಕ್ತಿಯಾರ್ ತಿಮ್ಮಾಪುರ, ಜಾಫರ್ ಬಾಗವಾನ್, ಜಾಫರಸಾಬ್, ಹಸನಸಾಬ್ ಮುಲ್ಲಾನವರ, ಮುಕ್ತಿಯಾರ್ ಅಹ್ಮದ್ ಸೇರಿದಂತೆ ಅಭಿಮಾನಿ ಬಳಗದ ಎಲ್ಲ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.