ಸವಣೂರು: 'ಸಾಮಾಜಿಕ ಚಿಂತನೆಯುಳ್ಳ ಯುವ ಜನತೆ ಮಾತ್ರ ನಿರಂತರ ಜೀವದಾನಕ್ಕೆ ಮುಂದಾಗಿ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಲು ಸಾಧ್ಯವಾಗಿದೆ’ ಎಂದು ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಕ್ತನಿಧಿ ಕೇಂದ್ರದ ವೈದ್ಯ ಡಾ.ಯಶವಂತ ತಿಳಿಸಿದರು.
ಮೊಹರಂ ಹಬ್ಬದ ಅಂಗವಾಗಿ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಜೀವದಾನಿಗಳ ಬಳಗ ವತಿಯಿಂದ ಗ್ರಾಮದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ. ಆದರೆ, ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಆದ್ದರಿಂದ, ರಕ್ತದಾನದ ಮೂಲಕ ಮಾತ್ರ ರಕ್ತ ಬೇಡಿಕೆ ಪೂರೈಸಬಹುದು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ ಮಾನವೀಯ ಸಮಾಜ ಕಾಣಲು ಸಾಧ್ಯ ಎಂದರು.
ರಕ್ತದಾನ ಶಿಬಿರ ಆಯೋಜಕ ಅಕ್ಬರ್‌ಅಲಿ ಫಿರಜಾದೆ ಮಾತನಾಡಿ, ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ರಕ್ತ ಶೇಖರಣಾ ಘಟಕದ ಪ್ರಯೋಗಶಾಲಾ ತಂತ್ರಜ್ಞ ಮಹಾಂತೇಶ ಹೊಳೆಮ್ಮನವರ ವಿವಿಧ ಗ್ರಾಮಗಳಲ್ಲಿ ಏರ್ಪಡಿಸುವ ರಕ್ತದಾನ ಶಿಬಿರಗಳಿಂದ ಪ್ರೇರಣೆಗೊಂಡು ಮೊಹರಂ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಶಿಬಿರ ಯಶಸ್ವಿಗೊಳಿಸಿ, ಪ್ರತಿ ವರ್ಷ ಶಿಬಿರ ನಡೆಸಲು ಪ್ರೇರಣೆಯಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ 36 ಯುವಕರು ರಕ್ತದಾನ ಮಾಡಿದರು.ಮೌಲಾಲಿ ಫಿರಜಾದೆ, ಕುತುಬುದ್ದೀನ್ ವಡವಿ, ಆಸೀಫ್ ಬೆಣ್ಣಿ, ಹುಸೇನ್ ಕರ್ಜಗಿ, ರಬ್ಬಾನಿ ತತ್ರಾಣಿ, ಹನುಮಂತ ಸವೂರ, ಸುನಿಲ ಹರಿಜನ, ಅಷ್ಫಾಕ್ ಕೋಟಿಯವರ, ಬಸವರಾಜ ಮೂಲಿಮನಿ, ಸಮುದಾಯ ಆರೋಗ್ಯ ಅಧಿಕಾರಿ ದೀಪಾ ಗುಡಿಮನಿ, ಪ್ರವೀಣ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.