ADVERTISEMENT

ತಡಸ: ರಸ್ತೆಯೇ ಇಲ್ಲದ ತಾಲ್ಲೂಕಿನ ಕೊನೆಯ ಗ್ರಾಮ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 4:44 IST
Last Updated 11 ಡಿಸೆಂಬರ್ 2025, 4:44 IST
ಜೊಂಡಲಗಟ್ಟ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಗಿದೆ
ಜೊಂಡಲಗಟ್ಟ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಗಿದೆ   

ತಡಸ: ಹತ್ತಿರದ ಹೊಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೊಂಡಲಗಟ್ಟಿ ಗ್ರಾಮವು ಶಿಗ್ಗಾವಿ ತಾಲ್ಲೂಕಿನ ಗಡಿ ಗ್ರಾಮವಾಗಿದ್ದು ಹಲವು ಸಮಸ್ಯೆಗಳಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ.

ರಾಜ್ಯ ಹೆದ್ದಾರಿಯಿಂದ ಒಳಗಡೆ 10 ಕಿ.ಮೀ. ಇರುವ ಜೊಂಡಲಗಟ್ಟ ಗ್ರಾಮಕ್ಕೆ ಬಸ್ ಸಂಚಾರ ಇಲ್ಲದೆ ಶಾಲಾ ಮಕ್ಕಳು, ರೋಗಿಗಳು, ವಯಸ್ಸಾದವರು ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ಶಾಸಕರು ಭೇಟಿ ನೀಡಿದ ನಂತರ ಬಸ್ ಸಂಚಾರ ಆರಂಭವಾಗಿದ್ದು, ಮತ್ತೆ ಸಂಚಾರ ನಿಲ್ಲಿಸಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಹಾಳಾದ ರಸ್ತೆ: ಕೆಲ ವರ್ಷಗಳ ಹಿಂದೆ ಡಾಂಬರೀಕರಣ ಕಾಮಗಾರಿ ಮಾಡಿರುವ ರಸ್ತೆ ಸಂಪೂರ್ಣ ತೆಗ್ಗು–ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಹಿಡಿ ಶಾಪ ಹಾಕುತ್ತಾ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಮತ್ತು ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ಸೇವೆಯ ರಸ್ತೆ ಹಾಳಗಿರುವುದರಿಂದ ಬರಲು ಹಿಂಜರಿಯುತ್ತಿದ್ದಾರೆ ಎಂದು ಗ್ರಾಮದ ಪರಶುರಾಮ ನಿಕ್ಕಂ ಹೇಳುತ್ತಾರೆ.

ADVERTISEMENT

ಗ್ರಾಮಸ್ಥರಿಗೆ ಸಿಗದ ಇಸ್ವತ್ತು: ಗ್ರಾಮದಲ್ಲಿ 50 ರಿಂದ 60 ಮನೆಗಳು ಇದ್ದು, ಸರ್ಕಾರದ ಯೋಜನೆ ಪಡೆಯಲು ತಮ್ಮ ಮನೆಗಳು ಹೆಸರು ಆಗಿರದ ಕಾರಣ ಯಾವ ಯೋಜನೆಗಳು ಸಿಗುತ್ತಿಲ್ಲ. ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಇಸ್ವತ್ತು ಮಾಡಿ ಕೊಟ್ಟು ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯ ಮಾಡಿ ಎಂದು ನಾಗರಾಜ ಬೋಸ್ಲೆ ಕಿಡಿಕಾರಿದರು.

‘ಜೊಂಡಲಗಟ್ಟಿ ಗ್ರಾಮವು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದ್ದು, ಕಂದಾಯ ಗ್ರಾಮದ ಕುರಿತು ಮಾಹಿತಿ ಕಳಿಸಲಾಗಿದೆ. ಅನೇಕ ಕಾರ್ಯಗಳು ಪ್ರಗತಿಯಲ್ಲಿವೆ. ಗ್ರಾಮದಲ್ಲಿರುವ ಕುಂದು ಕೊರತೆಯನ್ನು ಶೀಘ್ರದಲ್ಲಿ ಆಲಿಸಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೊಸೂರು ಗ್ರಾಮ ಪಂಚಾಯಿತಿ ಪಿಡಿಒ ಸದಾನಂದ ಚಿಗಳ್ಳಿ ಹೇಳಿದರು.

ಕಾಡು ಪ್ರಾಣಿಗಳ ಹಾವಳಿ ಆತಂಕ

‘ರಾತ್ರಿ ಸಮಯದಲ್ಲಿ ಮನೆ ಬಿಟ್ಟು ಹೊರ ಬರಲು ಆತಂಕ ಪಡುವಂತೆ ಆಗಿದೆ. ಜಮೀನುಗಳಿಗೆ ರಾತ್ರಿ ಸಮಯದಲ್ಲಿ ರೈತರು ಹೋಗಲು ಕಾಡಿನ ಕೆಲ ಪ್ರಾಣಿಗಳ ಹೆಜ್ಜೆ ಗುರುತು ಕೂಗಾಟ ಬೆಚ್ಚಿ ಬೀಳಿಸುತ್ತದೆ’ ಎಂದು ಪುಂಡಲೀಕ ಪಾಟೀಲ್ ಮಾಹಿತಿ ಹಂಚಿಕೊಂಡರು. ಅರಣ್ಯ ಪ್ರದೇಶದಲ್ಲಿ ಗ್ರಾಮದ ಮಕ್ಕಳು ಮಹಿಳೆಯರು ಓಡಾಟ ನಡೆಸಲು ಭಯಪಡುವಂತೆ ಆಗಿದೆ. ಕೆಲವರು ಶೌಚಕ್ಕೆ ಹೊರ ಪ್ರದೇಶವನ್ನು ಆಶ್ರಯಿಸಿದ್ದು ಕ್ರೂರಮೃಗಗಳಿಗೆ ಬಲಿಯಾಗ ಬೇಕಾದ ಅನಿವಾರ್ಯತೆ ಕೂಡಾ ಇದೆ. ಇಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯವಿಲ್ಲ. ಸರೀಸೃಪಗಳ ಭಯವಿದ್ದರೂ ಕಾಡಿನಲ್ಲಿ ಮಕ್ಕಳು ಮಲಮೂತ್ರ ವಿಸರ್ಜನೆಗೆ ಹೋಗುವಂತೆ ಆಗಿದೆ. ಶೌಚಾಲಯ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪಾಲಕರು ಅಳಲು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.