ADVERTISEMENT

ಕರ್ತವ್ಯಕ್ಕೆ ಗೈರು: 239 ಸಿಬ್ಬಂದಿ ವಜಾ?

ಜಿಲ್ಲೆಯಲ್ಲಿ 86 ಸಾರಿಗೆ ಬಸ್‌ಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 15:41 IST
Last Updated 19 ಏಪ್ರಿಲ್ 2021, 15:41 IST
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಹಾವೇರಿ ನಗರದ ಸಾರಿಗೆ ಬಸ್‌ ನಿಲ್ದಾಣದಲ್ಲಿ ಸೋಮವಾರ ಖಾಸಗಿ ವಾಹನ ಏರಲು ಪ್ರಯಾಣಿಕರು ಮುಗಿಬಿದ್ದ ದೃಶ್ಯ –ಪ್ರಜಾವಾಣಿ ಚಿತ್ರ 
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಹಾವೇರಿ ನಗರದ ಸಾರಿಗೆ ಬಸ್‌ ನಿಲ್ದಾಣದಲ್ಲಿ ಸೋಮವಾರ ಖಾಸಗಿ ವಾಹನ ಏರಲು ಪ್ರಯಾಣಿಕರು ಮುಗಿಬಿದ್ದ ದೃಶ್ಯ –ಪ್ರಜಾವಾಣಿ ಚಿತ್ರ    

ಹಾವೇರಿ: 6ನೇ ವೇತನ ಆಯೋಗದ ಅನ್ವಯಕ್ಕೆ ಪಟ್ಟು ಹಿಡಿದು ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 13 ದಿನ ಪೂರೈಸಿದ್ದು, ಮುಷ್ಕರದ ನಡುವೆಯೂ ಸೋಮವಾರ ಜಿಲ್ಲೆಯಲ್ಲಿ 86 ಸಾರಿಗೆ ಬಸ್‌ಗಳು ಸಂಚರಿಸಿದವು.

ಹಾವೇರಿ 14, ಹಿರೇಕೆರೂರು 28, ರಾಣೆಬೆನ್ನೂರು 10, ಹಾನಗಲ್‌ 12, ಬ್ಯಾಡಗಿ 13 ಹಾಗೂ ಸವಣೂರು ಘಟಕದಿಂದ 9 ಸಾರಿಗೆ ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಚಾಲಕರು ಮತ್ತು ನಿರ್ವಾಹಕರು ಒಟ್ಟು 150 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು.

ದಿನದಿಂದ ದಿನಕ್ಕೆ ಸಾರಿಗೆ ಬಸ್‌ಗಳ ಸಂಚಾರ ಏರಿಕೆ ಕಂಡಿತ್ತು. ಸೋಮವಾರ ಕನಿಷ್ಠ 200 ಬಸ್‌ಗಳು ಸಂಚರಿಸಬಹುದು ಎಂದು ಅಧಿಕಾರಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ರಾಜ್ಯದಾದ್ಯಂತ ಎಲ್ಲ ಡಿಪೋಗಳ ಮುಂಭಾಗ ಧರಣಿ ನಡೆಸಲು ಕರೆ ನೀಡಿದ ಮೇರೆಗೆ ನಿರೀಕ್ಷಿಸಿದ್ದ ಸಿಬ್ಬಂದಿಗಳು ಕರ್ತವ್ಯಕ್ಕೆ ಬರಲಿಲ್ಲ.ರಾಣೆಬೆನ್ನೂರು ಮತ್ತು ಬ್ಯಾಡಗಿ ಘಟಕಗಳ ಮುಂಭಾಗ ಸಾರಿಗೆ ನೌಕರರ ಕುಟುಂಬಸ್ಥರು ಕೆಲಕಾಲ ಧರಣಿ ನಡೆಸಿ, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ADVERTISEMENT

ಹಾವೇರಿ ಕೇಂದ್ರ ಬಸ್‌ ನಿಲ್ದಾಣದಿಂದ 20 ಖಾಸಗಿ ವಾಹನಗಳು ಕಾರ್ಯಾಚರಣೆ ನಡೆಸಿದವು. ಮ್ಯಾಕ್ಸಿಕ್ಯಾಬ್‌, ಟೆಂಪೋಟ್ರಾಕ್ಸ್‌ಗಳು ಸಾರಿಗೆ ಬಸ್‌ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಕರೆದೊಯ್ದವು. ಸಾರಿಗೆ ಬಸ್‌ಗಳ ಕೊರತೆಯಿಂದ ಖಾಸಗಿ ವಾಹನಗಳಿಗೆ ಜನರು ಮುಗಿಬಿದ್ದ ದೃಶ್ಯ ಕಂಡು ಬಂದಿತು.

‘ಮುಷ್ಕರವನ್ನು ಬೆಂಬಲಿಸುತ್ತಾ, ಕರ್ತವ್ಯಕ್ಕೆ ಗೈರು ಹಾಜರಾಗಿರುವ ಹಾವೇರಿ ವಿಭಾಗದ 239 ಪ್ರೊಬೇಷನರಿ ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಏಪ್ರಿಲ್‌ 20ರಂದು ಕರ್ತವ್ಯಕ್ಕೆ ಹಾಜರಾಗದಿದ್ದರೆ 239 ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲು ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ. ಕಾಯಂ ನೌಕರರ ವಜಾಕ್ಕೆ ಕಾನೂನು ನಿರ್ಬಂಧಗಳಿವೆ. ಆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಹಾವೇರಿ ವಿಭಾಗಕ್ಕೆ 13 ದಿನಗಳಲ್ಲಿ ₹6.50 ಕೋಟಿ ಆದಾಯ ನಷ್ಟವಾಗಿದೆ ಎಂದು ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.