ಹಾವೇರಿ:‘ಹಣ ಬಲದಿಂದ, ಜಾತಿಯ ಬಲದಿಂದ ಚುನಾವಣೆಗಳನ್ನು ಗೆಲ್ಲುವ ಕೆಟ್ಟ ಸಂಪ್ರದಾಯ ಕಾಂಗ್ರೆಸ್‌ನಿಂದ ಆರಂಭವಾಯಿತು. ಜಾತಿಯ ವಿಷ ಬೀಜ ಬಿತ್ತುತ್ತಿದ್ದ ಕಾಂಗ್ರೆಸ್, ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ದೂಳೀಪಟವಾಯಿತು’ ಎಂದು ಶಾಸಕ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಹಾನಗಲ್ ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಉಪಚುನಾವಣೆ ಪ್ರಚಾರಾರ್ಥ ಏರ್ಪಡಿಸಿದ್ದ ಬಿಜೆಪಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜನರು ಸ್ವಾಭಿಮಾನದಿಂದ ಬದುಕಲು ಅಗತ್ಯವಾದ ಸವಲತ್ತು ಮತ್ತು ಯೋಜನೆಗಳನ್ನು ಬಿಜೆಪಿ ರೂಪಿಸಿದೆ. ಮೋದಿ ಸರ್ಕಾರದ ಸವಲತ್ತು ಪಡೆಯದ ಒಂದೇ ಒಂದು ಕುಟುಂಬ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.
ಇನ್ನೂ 50 ವರ್ಷ ಕಾಂಗ್ರೆಸ್‌ನವರಿಗೆ ಅಡ್ರೆಸ್ ಇರುವುದಿಲ್ಲ. ಕಾಂಗ್ರೆಸ್ ಮುಖಂಡರು ತಮ್ಮ ಮೊಮ್ಮಕ್ಕಳಿಗೆ ‘ನಾವಂತೂ ಮುಳುಗಿ ಹೋಗಿದ್ದೇವೆ. ನೀವಾದರೂ ಬಿಜೆಪಿಗೆ ಸೇರಿಕೊಳ್ಳಿ’ ಎಂದು ಸಲಹೆ ನೀಡಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
‘ಬಿಜೆಪಿ ಸಚಿವರು ಚೀಲದಲ್ಲಿ ಹಣ ಹಂಚುತ್ತಿದ್ದಾರೆ ಎಂದು ಹೇಳುವ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು. ಮತದಾರರಿಗೆ ಅಪಮಾನ ಮಾಡುವ ಕೆಲಸ ಮಾಡಬೇಡಿ’ ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.