ADVERTISEMENT

ಅಧಿಕಾರ ಹೋಯಿತೆಂದು ಯಡಿಯೂರಪ್ಪ ಕಣ್ಣೀರು ಹಾಕಿರಲಿಲ್ಲ: ಸಂಸದ ಬಿ.ವೈ.ರಾಘವೇಂದ್ರ

ಸಂಸದ ಬಿ.ವೈ. ರಾಘವೇಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 13:28 IST
Last Updated 19 ಅಕ್ಟೋಬರ್ 2021, 13:28 IST
ಯಡಿಯೂರಪ್ಪ ಕಣ್ಣೀರು ಹಾಕಿದ ಸಂದರ್ಭ
ಯಡಿಯೂರಪ್ಪ ಕಣ್ಣೀರು ಹಾಕಿದ ಸಂದರ್ಭ   

ಹಾವೇರಿ: ‘ಒಂಬತ್ತು ಬಾರಿ ಆಯ್ಕೆ ಮಾಡಿ ಕಳುಹಿಸಿದ ಶಿಕಾರಿಪುರ ಹಾಗೂ ರಾಜ್ಯದ ಜನರನ್ನು ನೆನೆದು ಬಿ.ಎಸ್‌.ಯಡಿಯೂರಪ್ಪನವರು ಕಣ್ಣೀರು ಹಾಕಿದರೇ ವಿನಾ, ಅಧಿಕಾರ ಹೋಯಿತು ಎಂಬ ನೋವಿನಿಂದಲ್ಲ’ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಹಾನಗಲ್ ತಾಲ್ಲೂಕಿನ ಕಲಗುಡ್ಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯಡಿಯೂರಪ್ಪನವರು ಸಹಜವಾಗಿ ಭಾವನಾತ್ಮಕ ವ್ಯಕ್ತಿ. ಮನೆ ಮಕ್ಕಳನ್ನು ಹೊರದೇಶಕ್ಕೋ, ಹೊರರಾಜ್ಯಕ್ಕೋ ಕಳಿಸುವಾಗ ಕಣ್ಣೀರು ಹಾಕುವ ರೀತಿ ಅವರು ಕಂಬನಿ ಮಿಡಿದಿದ್ದಾರೆ ಎಂದು ಸಮರ್ಥನೆ ನೀಡಿದರು.

ಕಾಂಗ್ರೆಸ್‌ಗೆ ಲಾಭವಾಗೋಲ್ಲ

ADVERTISEMENT

ಬಿ.ಎಸ್‌.ಯಡಿಯೂರಪ್ಪನವರ ಮೇಲೆ ಅನುಕಂಪ, ಪ್ರೀತಿ ತೋರಿಸಿದ ಡಿ.ಕೆ.ಶಿವಕುಮಾರ್‌ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂಥ ಹೇಳಿಕೆಗಳಿಂದ ರಾಜಕೀಯವಾಗಿ ಯಾವ ಲಾಭವೂ ಆಗುವುದಿಲ್ಲ ಎಂದು ನಯವಾಗಿಯೇ ತಿರುಗೇಟು ನೀಡಿದರು.

ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕೊರಗಿನಲ್ಲೇ ಸಿ.ಎಂ. ಉದಾಸಿ ಕೊನೆಯುಸಿರೆಳೆದರು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಮತ್ತು ಸಿ.ಎಂ.ಉದಾಸಿ ಅವರ ಸಂಬಂಧ ಎಂಥದ್ದು ಎಂಬುದು ಜನರಿಗೆ ಗೊತ್ತಿದೆ. ಶಾಸಕರಾಗಿದ್ದ ಉದಾಸಿಯವರ ಆರೋಗ್ಯ ಕ್ಷೀಣಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯವಾಗಿ ಇನ್ನೂ ಹೆಚ್ಚು ಕಾಲ ನಮ್ಮೊಂದಿಗೆ ಇರಲಿ, ಅವರಿಗೆ ಕಾರ್ಯಭಾರದ ಒತ್ತಡವಾಗದಿರಲಿ ಎಂಬ ಕಾರಣದಿಂದ ಸಚಿವರನ್ನಾಗಿ ಮಾಡಲಿಲ್ಲ ಎಂದು ಸಮಜಾಯಿಷಿ ನೀಡಿದರು.

ಉದಾಸಿ ಅವರು ಯಡಿಯೂರಪ್ಪನವರ ಕಷ್ಟ ಕಾಲದಲ್ಲಿ ಬೆನ್ನಿಗೆ ನಿಂತು ಪ್ರೋತ್ಸಾಹ, ಸಲಹೆ ಕೊಟ್ಟವರು.ಉದಾಸಿಯವರಿಗೆ ಅನ್ಯಾಯ ಮಾಡುವ ಕೆಲಸವನ್ನು ಬಿಜೆಪಿ ಮಾಡಿಲ್ಲ. ಕಾಂಗ್ರೆಸ್‌ನವರು ಚುನಾವಣೆಗಳಲ್ಲಿ ಯಾವ ವಿಷಯಗಳೂ ಸಿಗಲಿಲ್ಲ ಎಂಬ ಕಾರಣಕ್ಕೆ ಇಂಥ ಭಾವನಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ.ಜಾತಿ, ಧರ್ಮಗಳ ಓಲೈಕೆ ರಾಜಕಾರಣ ಮಾಡಿ 60 ವರ್ಷ ಅಧಿಕಾರವನ್ನು ಪಡೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಬಿಎಸ್‌ವೈ ಅವರನ್ನು ಕಡೆಗಣಿಸಿಲ್ಲ

ಪಕ್ಷದಲ್ಲಿ ಬಿ.ಎಸ್‌.ಯಡಿಯೂರಪ್ಪನವರನ್ನು ಸೈಡ್‌ಲೈನ್‌ ಮಾಡುತ್ತಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ಯಡಿಯೂರಪ್ಪನವರು ಇದೆಲ್ಲವನ್ನು ಮೀರಿ ಬೆಳೆದ ನಾಯಕರು. ನನ್ನನ್ನು ಮೂರು ಬಾರಿ ಸಂಸದ ಹಾಗೂ ಒಂದು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಕಾರ್ಯಕರ್ತರಾಗಿ ನಾನು ಮತ್ತು ನನ್ನ ತಮ್ಮ (ಬಿ.ವೈ. ವಿಜಯೇಂದ್ರ) ಕೆಲಸ ಮಾಡುತ್ತಾ ಇದ್ದೇವೆ. ನಮಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ನಮ್ಮ ತಂದೆಯವರನ್ನು ಯಾರೂ ಕಡೆಗಣಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.