ಬ್ಯಾಡಗಿ: ಇಲ್ಲಿಯ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಗುರುವಾರ 33,813 ಚೀಲ (8,453 ಕ್ವಿಂಟಲ್) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ಪ್ರಸಕ್ತ ಸಾಲಿನ ಹಂಗಾಮು ಆರಂಭಗೊಂಡಿದ್ದರೂ, ಮೆಣಸಿನಕಾಯಿ ಬೆಲೆಯಲ್ಲಿ ಏರಿಕೆ ಕಾಣದೇ, ವಹಿವಾಟು ಮಂದಗತಿಯಲ್ಲಿ ಸಾಗಿತ್ತು. ಕಳೆದ ಸೋಮವಾರ ಡಬ್ಬಿ ಮೆಣಸಿನಾಯಿ ಬೆಲೆಯಲ್ಲಿ ತುಸು ಏರಿಕೆಯಾಗಿತ್ತು ಹೀಗಾಗಿ ಗುರುವಾರ ಆವಕದಲ್ಲಿ ತುಸು ಹೆಚ್ಚಳವಾಗಿದೆ.
ಮಾರುಕಟ್ಟೆಗೆ 5,940 ಲಾಟ್ ಮೆಣಸಿನಕಾಯಿ ಚೀಲಗಳನ್ನು ಟೆಂಡರ್ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 441 ಲಾಟ್ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ. 2 ಚೀಲ ಡಬ್ಬಿ ಮೆಣಸಿನಕಾಯಿ ₹ 38,199 ರಂತೆ, 33 ಚೀಲ ಕಡ್ಡಿ ಮೆಣಸಿನಕಾಯಿ ₹ 31,501 ರಂತೆ ಹಾಗೂ ಗುಂಟೂರು ತಳಿ ಮೆಣಸಿನಕಾಯಿ ₹ 16,609 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ. ಸರಾಸರಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಬ್ಯಾಡಗಿ ಡಬ್ಬಿ ₹ 26,509, ಬ್ಯಾಡಗಿ ಕಡ್ಡಿ ₹ 25,059 ಹಾಗೂ ಗುಂಟೂರ ತಳಿ ₹ 13,509 ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 276 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.