
ಬ್ಯಾಡಗಿ ಮೆಣಸಿನಕಾಯಿ
ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಫೆ.16ರಂದು 4 ಚೀಲ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹89,999 ರಂತೆ ಮಾರಾಟವಾಗಿವೆ.
ಬ್ಯಾಡಗಿ ಮೂಲ ತಳಿಯ ಗುಣಲಕ್ಷಣ ಹೊಂದಿರುವ ಮೆಣಸಿನಕಾಯಿಯನ್ನು ಬಿತ್ತನೆ ಬೀಜಕ್ಕಾಗಿ ಖರೀದಿಸುವ ಕಾರಣದಿಂದ ಬೆಲೆ ಹೆಚ್ಚಳ ಕಂಡು ಬಂದಿದೆ ಎನ್ನಲಾಗಿದೆ. ಪ್ರಸಕ್ತ ಮೆಣಸಿನಕಾಯಿ ನಾಟಿ (ಬಿತ್ತನೆ) ಬಳಿಕ ಅಕಾಲಿಕ ಮಳೆ ಸುರಿದ ಪರಿಣಾಮ ರೋಗಕ್ಕೆ ತುತ್ತಾದ ಮೆಣಸಿನಕಾಯಿ ಬೆಳೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದೆ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರು. ಈ ಕಾರಣದಿಂದ ಮೆಣಸಿನಕಾಯಿ ಬೆಲೆ ಏರಿಕೆಯತ್ತ ಸಾಗಿದೆ ಎನ್ನಲಾಗಿದೆ.
ಫೆ.16ರಂದು ಒಟ್ಟು 1,47,893 ಚೀಲ (36,973 ಕ್ವಿಂಟಲ್) ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ಹೆಚ್ಚಳವಾಗಿದೆ. ಪ್ರಸಕ್ತ ಹಂಗಾಮಿನಲ್ಲಿ 3ನೇ ಬಾರಿಗೆ 1 ಲಕ್ಷ ಚೀಲಕ್ಕಿಂತ ಹೆಚ್ಚಿನ ಆವಕವಾದಂತಾಗಿದೆ. ಮಾರುಕಟ್ಟೆಯಲ್ಲಿ ಒಟ್ಟು 16,288 ಲಾಟ್ ಮೆಣಸಿನಕಾಯಿ ಟೆಂಡರ್‌ಗೆ ಇಡಲಾಗಿದ್ದು, ತೇವಾಂಶ ಹೆಚ್ಚಿರುವ ಹಾಗೂ ಕಡಿಮೆ ಗುಣಮಟ್ಟದ 348 ಲಾಟ್‌ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ. ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹89,999, ಕಡ್ಡಿ ಮೆಣಸಿನಕಾಯಿ ₹69,999 ಹಾಗೂ ಗುಂಟೂರು ತಳಿ ₹18,909ಕ್ಕೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ.
ಸರಾಸರಿ ಬೆಲೆಯಲ್ಲಿಯೂ ತುಸು ಹೆಚ್ಚಳವಾಗಿದ್ದು, ಬ್ಯಾಡಗಿ ಕಡ್ಡಿ ₹48,259, ಬ್ಯಾಡಗಿ ಡಬ್ಬಿ ₹51,569 ಹಾಗೂ ಗುಂಟೂರ ತಳಿ ₹14,809ರಂತೆ ಮಾರಾಟವಾಗಿದೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 367 ವರ್ತಕರು ಭಾಗವಹಿಸಿದ್ದು, ಒಟ್ಟು 1.37 ಲಕ್ಷ ಬಾರಿ ದರವನ್ನು ಕೋಟ್ ಮಾಡಿದ್ದಾರೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.