ADVERTISEMENT

ಖಾಸಗಿ ಆಸ್ಪತ್ರೆಗಳು ತೆರೆಯದಿದ್ದರೆ ಲೈಸೆನ್ಸ್‌ ರದ್ದು

ಜಿಲ್ಲೆಯ ಎಲ್ಲ ಕ್ಲಿನಿಕ್‌ಗಳನ್ನು ತೆರೆಯಲು ನೋಟಿಸ್‌ ನೀಡಿ: ಕೃಷಿ ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 11:32 IST
Last Updated 30 ಮಾರ್ಚ್ 2020, 11:32 IST
ಹಾವೇರಿ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು. ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಇದ್ದಾರೆ  –ಪ್ರಜಾವಾಣಿ ಚಿತ್ರ 
ಹಾವೇರಿ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು. ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಇದ್ದಾರೆ  –ಪ್ರಜಾವಾಣಿ ಚಿತ್ರ    

ಹಾವೇರಿ: ಲಾಕ್‌ಡೌನ್‌ ಸಂದರ್ಭದಲ್ಲಿ ಮುಚ್ಚಿರುವ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳನ್ನು ಕೂಡಲೇ ತೆರೆಯಲು ನೋಟಿಸ್‌ ನೀಡಬೇಕು. ತೆರೆಯದಿದ್ದರೆ ಪರವಾನಗಿ ರದ್ದು ಮಾಡಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವೈದ್ಯಕೀಯ ಸೇವೆ ಎಂಬುದು ಅತ್ಯವಶ್ಯ ಸೇವೆಯಲ್ಲಿ ಬರುತ್ತದೆ. ಹಾಗಾಗಿ ಯಾವುದೇ ವೈದ್ಯರು ತಮ್ಮ ಸೇವೆಯಿಂದ ಹಿಮ್ಮುಖರಾಗಬಾರದು. ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ಮೆಡಿಕಲ್‌ ಶಾಪ್‌ಗಳನ್ನು ತೆರೆದು ಜನರಿಗೆ ಸೇವೆ ನೀಡಬೇಕು. ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ಶ್ರಮಿಸಬೇಕು ಎಂದು ಹೇಳಿದರು.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿದೆ. ಇದು ಬಹಳ ಆತಂಕಕಾರಿ ಬೆಳವಣಿಗೆ. ರಾಣೆಬೆನ್ನೂರು ನಗರ ಮತ್ತು ಹಾವೇರಿ ನಗರದಲ್ಲಿ ಪರಿಸ್ಥಿತಿ ಅವಲೋಕಿಸಿದ್ದೇನೆ. ಶಾಸಕರಾದ ನೆಹರೂ ಮತ್ತು ಅರುಣಕುಮಾರ ಗುತ್ತಾರ್‌ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕು ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿ, ಕಂದಾಯ ನೌಕರರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.

ADVERTISEMENT

ಮನೆಯಿಂದ ಹೊರಬಂದರೆ ಕ್ರಮ: ಅದೃಷ್ಟವಶಾತ್‌ ಹಾವೇರಿ ಜಿಲ್ಲೆಯಲ್ಲಿ ಒಂದೇ ಒಂದು ಪಾಸಿಟಿವ್‌ ಪ್ರಕರಣ ಕಂಡು ಬಂದಿಲ್ಲ. ಇದೇ ರೀತಿ ಎಲ್ಲರೂ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು. ಈಗಾಗಲೇ ವಿದೇಶದಿಂದ ಬರುವವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹೋಮ್‌ ಕ್ವಾರೆಂಟೈನ್‌ ಇರುವವರು 14 ದಿನ ಮನೆಯಲ್ಲೇ ಇರಬೇಕು. ಅವರು ಮನೆಯಿಂದ ಹೊರಗೆ ಕಾಣಿಸಿಕೊಂಡರೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನೀರು, ಹಾಲು, ತರಕಾರಿ, ಔಷಧ ಮುಂತಾದ ಅತ್ಯವಶ್ಯ ವಸ್ತುಗಳಿಗಾಗಿ ಮಾತ್ರ ಹೊರಗಡೆ ಬರಬಹುದು. ಈಗಾಗಲೇ 144 ಸೆಕ್ಷನ್‌ ಜಿಲ್ಲೆಯಲ್ಲಿ ಜಾರಿಯಲ್ಲಿದೆ. ಅನಗತ್ಯವಾಗಿ ಓಡಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

ಅಗತ್ಯ ಇದ್ದವರಿಗೆ ಮಾತ್ರ ಇಂಧನ: ಅತ್ಯಗತ್ಯ ವಸ್ತುಗಳಾದ ಆಹಾರ ಸಾಮಗ್ರಿ, ಔಷಧ, ರೈತರಿಗೆ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಪೂರೈಕೆ ಮಾಡಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ಬಂಧವಿಲ್ಲ. ರೈತರ ಟ್ರಾಕ್ಟರ್‌ಗೆ ಡೀಸೆಲ್‌ ಪೂರೈಸಲು ಕ್ರಮ ವಹಿಸಲಾಗಿದೆ. ಕ್ಯಾನ್‌ಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ತುಂಬಿಸಿಕೊಳ್ಳಲು ಅವಕಾಶವಿಲ್ಲ. ಅದು ದುರುಪಯೋಗಕ್ಕೆ ಕಾರಣವಾಗುತ್ತದೆ. ಕೋವಿಡ್‌–19 ಸೇವೆಯಲ್ಲಿ ತೊಡಗಿರುವ ಎಲ್ಲರಿಗೂ ಇಂಧನ ಸಿಗಲಿದೆ ಎಂದರು.

ಕೃಷಿ ಯಂತ್ರಗಳ ಬಳಕೆಗೆ ಬೇಕಾದ ಇಂಧನವನ್ನು ಪೂರೈಸಲ ಕ್ರಮವಹಿಸಲಾಗುವುದು. ಪ್ರತಿ ತಾಲೂಕಿನಲ್ಲಿ ಸಹಾಯಕ ಕೃಷಿ ನಿರ್ದೇಶಕರು, ತೋಟಗಾರಿಕಾ ಸಹಾಯಕ ನಿರ್ದೇಶಕರು, ಎ.ಪಿ.ಎಂ.ಸಿ.ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಪರವಾನಗಿ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಮಾರುಕಟ್ಟೆ ಬಂದ್‌: ಸಂತೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ತೆರೆದರೆ ಜನರು ಗುಂಪುಗೂಡುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದರಿಂದ ಸೋಂಕು ಹರಡಲು ಕಾರಣವಾಗುತ್ತದೆ. ಹಾಗಾಗಿ ಸಂತೆ, ಮಾರುಕಟ್ಟೆಗಳನ್ನು ತೆರೆಯಲು ಸಾಧ್ಯವಿಲ್ಲ. ವಾರ್ಡ್‌ಗಳಲ್ಲೇ ತರಕಾರಿಯನ್ನು ತಳ್ಳುಗಾಡಿಯಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದರು.

ಖರೀದಿಗೆ ಕ್ರಮ: ಮಾಸ್ಕ್, ವೆಂಟಿಲೇಟರ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಹಾಗೂ ಕೋವಿಡ್-19 ವೈದ್ಯಕೀಯ ಕಿಟ್ ಸೇರಿದಂತೆ ಅಗತ್ಯ ಉಪಕರಣಗಳ ಖರೀದಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೆ ಪೂರೈಕೆಯಾಗಲಿವೆ. ಕೊರೊನಾ ಹೊರತುಪಡಿಸಿದ ಇತರೆ ರೋಗಿಗಳನ್ನು ನೋಡಲು ಖಾಸಗಿ ಆಸ್ಪತ್ರೆಯಲ್ಲೂ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.