ಜಾತಿ ಸಮೀಕ್ಷೆ
ಹಾವೇರಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಆರಂಭಿಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸೆ. 22ರಂದು ಚಾಲನೆ ಸಿಗಲಿದೆ. ಅಕ್ಟೋಬರ್ 7ರವರೆಗೆ ಸಮೀಕ್ಷೆ ನಡೆಯಲಿದ್ದು, ಜಿಲ್ಲೆಯ ಜನರಿಂದ ಮಾಹಿತಿ ಸಂಗ್ರಹಿಸುವ ಜವಾಬ್ದಾರಿಯನ್ನು 3,777 ಗಣತಿದಾರರಿಗೆ ವಹಿಸಲಾಗಿದೆ.
ಹೆಸ್ಕಾಂ ಮೀಟರ್ ಅಳವಡಿಕೆ ಮಾಹಿತಿ ಆಧರಿಸಿ ಜಿಲ್ಲೆಯಲ್ಲಿರುವ 4.14 ಲಕ್ಷ ಮನೆಗಳ ಬಾಗಿಲಿಗೆ ಈಗಾಗಲೇ ಸ್ಟಿಕ್ಕರ್ ಅಂಟಿಸಲಾಗಿದೆ. ಈ ಮನೆಗಳಿಂದ ಮಾಹಿತಿ ಸಂಗ್ರಹಿಸಲು 3,777 ಬ್ಲಾಕ್‌ಗಳನ್ನು ಮಾಡಲಾಗಿದೆ. ಪ್ರತಿ ಬ್ಲಾಕ್‌ಗೂ ಒಬ್ಬೊಬ್ಬ ಗಣತಿದಾರರನ್ನು ನಿಯೋಜಿಸಲಾಗಿದೆ.
ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಅವರೆಲ್ಲರಿಗೂ ಈಗಾಗಲೇ ತರಬೇತಿ ನೀಡಲಾಗಿದೆ. ಮೊಬೈಲ್ ಆ್ಯಪ್ ಮೂಲಕವೇ ಸಮೀಕ್ಷೆ ನಡೆಯುತ್ತಿರುವುದರಿಂದ, ಆ್ಯಪ್ ಬಗ್ಗೆಯೂ ಮಾಹಿತಿ ತಿಳಿಸಲಾಗಿದೆ.
‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗಣತಿದಾರರಿಗೆ ಎಲ್ಲ ರೀತಿಯ ತರಬೇತಿ ನೀಡಲಾಗಿದೆ. ಸೆ. 22ರಿಂದ ಸಮೀಕ್ಷೆ ಶುರುವಾಗಲಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
‘ಒಬ್ಬ ಗಣತಿದಾರರಿಗೆ 100ರಿಂದ 150 ಮನೆಗಳ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ವಹಿಸಲಾಗಿದೆ. 20 ಬ್ಲಾಕ್‌ಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳಲಿದ್ದಾರೆ’ ಎಂದರು.
‘ಸಮೀಕ್ಷೆ ಮಾಡಲು ಮನೆಗೆ ಬರುವ ಗಣತಿದಾರರಿಗೆ ಜನರು ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು. ಪಡಿತರ ಚೀಟಿ, ಮನೆಯಲ್ಲಿರುವ ಎಲ್ಲರ ಆಧಾರ್ ಕಾರ್ಡ್, ಅಂಗವಿಕಲರ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ತೋರಿಸಬೇಕು. ಮಾಹಿತಿ ನೀಡಿದ ನಂತರ, ಎಲ್ಲ ಮಾಹಿತಿ ಖಚಿತಪಡಿಸಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.