ಸಾವು
ಪ್ರಾತಿನಿಧಿಕ ಚಿತ್ರ
ಹಾವೇರಿ: ಜಿಲ್ಲೆಯ ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯಲ್ಲಿ ಲಿಂಗೇಶ (35) ಎಂಬುವವರ ಮೃತದೇಹ ಪತ್ತೆಯಾಗಿದ್ದು, ಕತ್ತು ಕೊಯ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
‘ಚಿತ್ರದುರ್ಗದ ದೊಡ್ಡಪೇಟೆಯ ನಿವಾಸಿ ಲಿಂಗೇಶ ಅವರು, ಎಂ. ತೇಜಪ್ಪ ಅವರ ಪುತ್ರ. ಲಿಂಗೇಶ ಅವರು ನೃತ್ಯ ಶಿಕ್ಷಕರಾಗಿದ್ದರು. ನೃತ್ಯ ಶಾಲೆ ಹಾಗೂ ಗೆಳೆಯರ ಜೊತೆ ‘ಕಲರ್ಸ್ ಕೆಫೆ’ ನಡೆಸುತ್ತಿದ್ದರು. ಅವರ ಕೊಲೆ ಬಗ್ಗೆ ತಾಯಿ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಬ್ಯಾಡಗಿ ಪೊಲೀಸರು ಹೇಳಿದರು.
‘ಗೆಳೆಯ ಬೊಡಾ ಎಂಬುವವರ ಜನ್ಮದಿನವಿದೆ. ಆತನಿಗೆ ಚಿನ್ನದ ಸರ ಉಡುಗೊರೆ ನೀಡಬೇಕು’ ಎಂದು ಮನೆಯಲ್ಲಿ ಹೇಳಿದ್ದ ಲಿಂಗೇಶ, ಆಗಸ್ಟ್ 24ರಂದು ಮಧ್ಯಾಹ್ನ ಬೈಕ್‌ನಲ್ಲಿ ಹೊರಟಿದ್ದರು. ರಾತ್ರಿ 8.45 ಗಂಟೆಗೆ ತಂದೆಗೆ ಕರೆ ಮಾಡಿದ್ದ ಲಿಂಗೇಶ, ‘ಅರ್ಧ ಗಂಟೆಯಲ್ಲಿ ಊಟಕ್ಕೆ ಮನೆಗೆ ಬರುತ್ತೇನೆ’ ಎಂದಿದ್ದರು. ಅದರ ನಡುವೆಯೇ ಮೋಟೆಬೆನ್ನೂರು ಬಳಿಯ ಮೇಲ್ಸೇತುವೆಯಲ್ಲಿ ಲಿಂಗೇಶ ಮೃತದೇಹ ಪತ್ತೆಯಾಗಿದೆ’ ಎಂದರು.
‘ಮೃತದೇಹ ನೋಡಿದ್ದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಹರಿತವಾದ ಆಯುಧದಿಂದ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಬಗ್ಗೆ ತಾಯಿಯೇ ದೂರಿನಲ್ಲಿ ತಿಳಿಸಿದ್ದಾರೆ. ಇದು ಕೊಲೆಯೋ ಅಥವಾ ಅಪಘಾತವೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.