ಹಾವೇರಿ/ರಾಣೆಬೆನ್ನೂರು: ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದಲ್ಲಿರುವ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪದ (ಗದ್ದುಗೆ) ಅಭಿವೃದ್ಧಿ ವಿಚಾರವಾಗಿ ಎರಡು ಬಣಗಳ ನಡುವೆ ವೈಮನಸ್ಸು ಮೂಡಿದೆ. ಗದ್ದುಗೆ ವೀಕ್ಷಣೆಗೆ ಹೋಗಿದ್ದ ಸಚಿವ ಎಚ್.ಕೆ. ಪಾಟೀಲ ಎದುರೇ, ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅವರಿಗೆ ಸ್ಥಳೀಯರು ಘೇರಾವ್ ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ರಾಣೆಬೆನ್ನೂರು ತಾಲ್ಲೂಕಿನಲ್ಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿ ಉದ್ದೇಶದಿಂದ ಸಚಿವ ಪಾಟೀಲ ಅವರು ಶುಕ್ರವಾರ (ಜು. 4) ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಶಾಸಕ ಪ್ರಕಾಶ ಕೋಳಿವಾಡ ಸಹ ಸಾಥ್ ನೀಡಿದ್ದರು.
ಶರಣ ಅಂಬಿಗರ ಚೌಡಯ್ಯನವರ ಗದ್ದುಗೆ ವೀಕ್ಷಣೆ ಮಾಡುವುದಾಗಿ ಮುಂಚೆಯೇ ತಿಳಿಸಿದ್ದ ಸಚಿವ, ಮೊದಲಿಗೆ ಚಿತ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಒಡೆಯರ ಮಠಕ್ಕೆ ತೆರಳಿದ್ದರು. ಗ್ರಾಮದ ಮುಖಂಡರು ಹಾಗೂ ಸ್ವಾಮೀಜಿ ಜೊತೆಗೆ ಚರ್ಚಿಸಿದ್ದರು. ಬಳಿಕ, ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠಕ್ಕೆ ಭೇಟಿ ನೀಡಿದ್ದರು. ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಜೊತೆ ಚರ್ಚಿಸಿದ್ದರು.
ಸಚಿವರು ಐಕ್ಯಮಂಟಪಕ್ಕೆ ಬರುತ್ತಾರೆಂದು ತಿಳಿದಿದ್ದ ಕೆಲವರು, ಅವರಿಗಾಗಿ ಕಾಯುತ್ತ ನಿಂತಿದ್ದರು. ಆದರೆ, ಸಚಿವರು ನರಸೀಪುರಕ್ಕೆ ಹೋಗಿದ್ದಾರೆಂದು ತಿಳಿದು ಪುನಃ ಎಲ್ಲರೂ ಅಲ್ಲೀಗೆ ಹೋಗಿದ್ದರು. ಸಚಿವ ಪಾಟೀಲ ಅವರಿಗೆ ಗದ್ದುಗೆ ಅಭಿವೃದ್ಧಿ ಸಂಬಂಧ ಮನವಿ ಸಲ್ಲಿಸಿದ್ದರು. ‘ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಐಕ್ಯಮಂಟಪ ಭಾಗಶಃ ಮುಳುಗಡೆಯಾಗಿದೆ. ವೀಕ್ಷಣೆಗೆ ಬಂದಿರುವ ನೀವು, ಐಕ್ಯಮಂಟಪವನ್ನು ದೂರದಿಂದಲೇ ಒಮ್ಮೆ ನೋಡಿಕೊಂಡು ಹೋಗಬೇಕು’ ಎಂದು ಕೆಲ ಗ್ರಾಮಸ್ಥರು ಒತ್ತಾಯಿಸಿದ್ದರು.
ಅದಕ್ಕೆ ಒಪ್ಪಿದ ಸಚಿವ ಪಾಟೀಲ, ತಮ್ಮ ಕಾರಿನಲ್ಲಿಯೇ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅವರನ್ನು ಕರೆದುಕೊಂಡು ರಾತ್ರಿ 9 ಗಂಟೆಗೆ ಚೌಡಯ್ಯದಾನಪುರಕ್ಕೆ ಹೋಗಿದ್ದರು. ಸ್ವಾಮೀಜಿ ಇರುವುದನ್ನು ನೋಡಿದ್ದ ಕೆಲ ಗ್ರಾಮಸ್ಥರು, ಪ್ರಮುಖ ವೃತ್ತದಲ್ಲಿ ಕಾರು ತಡೆದಿದ್ದರು. ಸ್ವಾಮೀಜಿ ಅವರಿಗೆ ಘೇರಾವ್ ಹಾಕಿ, ವಾಪಸು ಹೋಗುವಂತೆ ಪಟ್ಟು ಹಿಡಿದರು. ಸಚಿವ ಹಾಗೂ ಶಾಸಕ, ಗ್ರಾಮಸ್ಥರ ಮನವೋಲಿಸಲು ಯತ್ನಿಸಿ ವಿಫಲರಾದರು.
‘ಐಕ್ಯಮಂಟಪ ಅಭಿವೃದ್ಧಿಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ನರಸೀಪುರ ಸ್ವಾಮೀಜಿ ಸಹ ಅಭಿವೃದ್ಧಿಗೆ ಆಸಕ್ತಿ ತೋರುತ್ತಿಲ್ಲ. ಅವರನ್ನು ಏಕೆ ಜೊತೆಯಲ್ಲಿ ಕರೆದುಕೊಂಡು ಬಂದಿದ್ದೀರಾ? ಸಚಿವರು ಹಾಗೂ ಶಾಸಕರು ಐಕ್ಯ ಮಂಟಪಕ್ಕೆ ಹೋಗಲು ನಮ್ಮ ಅಭ್ಯಂತರವಿಲ್ಲ. ಆದರೆ, ನರಸೀಪುರದ ಸ್ವಾಮೀಜಿಯವರನ್ನು ಮುಂದಕ್ಕೆ ಹೋಗಲು ಬಿಡುವುದಿಲ್ಲ’ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.
ಸ್ಥಳದಲ್ಲಿ ಎರಡು ಬಣದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಮಾತಿನ ಚಕಮಕಿಯೂ ನಡೆಯಿತು. ನಂತರ, ಸ್ವಾಮೀಜಿ ಸಮೇತವಾಗಿ ಸಚಿವ–ಶಾಸಕರು ಅಲ್ಲಿಂದ ತೆರಳಿದ ಮೇಲೆಯೇ ಪರಿಸ್ಥಿತಿ ತಿಳಿಗೊಂಡಿತು.
ಪರ್ಯಾಯ ಸ್ವಾಮೀಜಿ ತಟಸ್ಥ: ಅಂಬಿಗರ ಸಮುದಾಯದ ಕೆಲವರು ಐಕ್ಯ ಮಂಟಪಕ್ಕೆ ನೂತನವಾಗಿ ಅಭಿನವ ಶಾಂತ ಸ್ವಾಮೀಜಿ (ವೀರಭದ್ರಪ್ಪ ದೀಪಾವಳಿ) ಅವರಿಗೆ ಪಟ್ಟಾಭಿಷೇಕ ನೆರವೇರಿಸಿದ್ದಾರೆ. ಶುಕ್ರವಾರ ನಡೆದ ಘಟನೆಯ ಸಂದರ್ಭದಲ್ಲಿ ಅಭಿನವ ಶಾಂತ ಸ್ವಾಮೀಜಿ ತಟಸ್ಥರಾಗಿ ಉಳಿದಿದ್ದು ಕಂಡುಬಂತು.
‘ಐಕ್ಯಮಂಟಪದ ವೀಕ್ಷಣೆಗೆ ತೆರಳಿದ್ದಾಗ ಕೆಲ ಪಟ್ಟಭದ್ರ ಹಿತಾಸಕ್ತಿ ಜನರು ನನಗೆ ಹಾಗೂ ಸಚಿವರಿಗೆ ಘೇರಾವ್ ಹಾಕಿ ವಾಪಸು ಕಳುಹಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ದೂರಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಐಕ್ಯಮಂಟಪದ ಅಭಿವೃದ್ಧಿ ಹಾಗೂ ಪ್ರತ್ಯೇಕ ಪ್ರಾಧಿಕಾರದ ರಚನೆಗಾಗಿ ಹೋರಾಟ ನಡೆಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿಯೇ ಕೆಲವರು ಐಕ್ಯಮಂಟಪ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವುದು ಖೇದಕರ ಸಂಗತಿ’ ಎಂದರು.
‘ಗದ್ದುಗೆ ವೀಕ್ಷಿಸಲು ಸಚಿವರು ನಮ್ಮನ್ನೂ ಜೊತೆಯಲ್ಲಿ ಕರೆದೊಯ್ದಿದ್ದರು. ಆದರೆ ಗ್ರಾಮದ ಕೆಲವರು ಗದ್ದುಗೆ ನೋಡಲು ಅಡ್ಡಿಪಡಿಸಿದ್ದಾರೆ. ಇದು ಗುರುಪೀಠಕ್ಕೆ ಸರ್ಕಾರಕ್ಕೆ ಸಚಿವರಿಗೆ ಹಾಗೂ ಭಕ್ತರಿಗೆ ಮಾಡಿದ ಅವಮಾನ. ಗದ್ದುಗೆ ಅಭಿವೃದ್ಧಿಪಡಿಸಲು ಹೋದಾಗಲ್ಲೆಲ್ಲ ವಿರೋಧವಾಗುತ್ತಿರುವುದು ವಿಷಾದನೀಯ’ ಎಂದು ಹೇಳಿದರು. ‘ನಮ್ಮ ಸಮಾಜಕ್ಕೆ ಇರುವುದು ಒಂದೇ ಗುರುಪೀಠ. ಎಲ್ಲರನ್ನೂ ಸಮಾನತೆಯಿಂದ ಕೊಂಡೊಯ್ಯುವುದೇ ನಮ್ಮ ಉದ್ದೇಶ. ಅಸಮಾಧಾನಗಳಿದ್ದರೆ ಸ್ಥಳೀಯರೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಲಾಗುವುದು’ ಎಂದರು.
‘ಪ್ರಾಚ್ಯ ಪುರಾತ್ವದ ಇಲಾಖೆಯ ಕೆಲ ನಿಯಮಗಳಿಂದ ಗದ್ದುಗೆ ಅಭಿವೃದ್ಧಿಗೆ ಅಡ್ಡಿಯಾಗಿದೆ. ಈ ಬಗ್ಗೆ ಸದ್ಯದಲ್ಲೇ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಚರ್ಚಿಸಲಾಗುವುದು’ ಎಂದು ಹೇಳಿದರು. ಸಮುದಾಯದ ಮುಖಂಡರಾದ ಚಂದ್ರಪ್ಪ ಜಾಲಗಾರ ಮಾಲತೇಶ ತಿಪ್ಪೆಗುಂಡಿ ಬಸವರಾಜ ಕಳಸೂರು ಪ್ರದೀಪ ಶೇಷಗಿರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.