
ಹಾವೇರಿ: ‘ಮುಖ್ಯಮಂತ್ರಿ ಬದಲಾವಣೆ ವಿಷಯಕ್ಕೆ ನಾನು ಏಕೆ ಪ್ರತಿಕ್ರಿಯಿಸಬೇಕು? ಯಾವುದನ್ನೂ ಹೇಳಲಾಗದು. ಇದು, ಇಷ್ಟು ದಿನಗಳಿಂದ ಚರ್ಚೆ ಆಗುತ್ತಿರುವುದು ನೋಡಿದರೆ, ಇದು ಗಿನ್ನಿಸ್ ದಾಖಲೆ ಆಗುವಂತಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಜಿಲ್ಲೆಯ ರಟ್ಟೀಹಳ್ಳಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿ.ಎಂ ಬದಲಾವಣೆ ಚರ್ಚೆಯಿಂದ ಜನರ ಜೀವನ ನಡೆಯುವುದಿಲ್ಲ. ಹೊಟ್ಟೆ ತುಂಬುವುದಿಲ್ಲ’ ಎಂದರು.
ಸಚಿವ ಸಂಪುಟದ ಹಿರಿಯ ಸಚಿವರನ್ನು ಕೈ ಬಿಡುವ ಬಗ್ಗೆ ನಡೆದಿರುವ ಚರ್ಚೆ ಕುರಿತ ಪ್ರಶ್ನೆಗೆ, ‘ಅರ್ಹತೆಯ ನಿರೀಕ್ಷೆ ಮೀರಿ ನನಗೆ ಅವಕಾಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಏನೇ ಅವಕಾಶ ಕೊಟ್ಟರೂ ಸಮಚಿತ್ತದಿಂದ ಸ್ವೀಕರಿಸಿ ಮುಂದುವರಿಯುವೆ’ ಎಂದರು.
‘ಕಾಂಗ್ರೆಸ್ ಸರ್ಕಾರದಿಂದ ಹೈಕಮಾಂಡ್‌ಗೆ ಹಣ ಹೋಗುತ್ತಿದೆ’ ಎಂಬ ಬಿಜೆಪಿ ಆರೋಪಕ್ಕೆ ಅವರು, ‘ಬಿಜೆಪಿಯವರು ಎಲ್ಲ ಮರೆತಂತಿದೆ. ಬಿಜೆಪಿಯವರು ದೆಹಲಿಗೆ ಎಷ್ಟು ಸಾವಿರ ಕೋಟಿ ಕೊಟ್ಟಿದ್ದಾರೆ ಎಂದು ವೇದಿಕೆ ಮೇಲೇ ಮಾತನಾಡಿದ್ದರು. ಅನಂತ್‌ಕುಮಾರ್–ಯಡಿಯೂರಪ್ಪ ಮಾತನಾಡಿದ್ದು ಎಲ್ಲರಿಗೂ ಗೊತ್ತಿದೆ. ಅದು ಅವರ ಸಂಸ್ಕೃತಿ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.