ADVERTISEMENT

ಕೋಟ ಶ್ರೀನಿವಾಸ ಪೂಜಾರಿಗೆ ಸಿಎಂ ಸ್ಥಾನ: ಪ್ರಣವಾನಂದರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 11:30 IST
Last Updated 27 ಜುಲೈ 2021, 11:30 IST
ಪ್ರಣವಾನಂದ ಸ್ವಾಮೀಜಿ 
ಪ್ರಣವಾನಂದ ಸ್ವಾಮೀಜಿ    

ಹಾವೇರಿ: ‘ಆರ್ಯ ಈಡಿಗ ಸಮಾಜದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತೇವೆ ಎಂದು ಕೇಂದ್ರದಿಂದ ನಮಗೆ ಮಾಹಿತಿ ಸಿಕ್ಕಿದೆ’ ಎಂದು ಆರೇಮಲ್ಲಾಪುರದ ಪ್ರಣವಾನಂದರಾಮ ಸ್ವಾಮೀಜಿ ಹೇಳಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಆರ್ಯ ಈಡಿಗ ಸಮಾಜಕ್ಕೆ ಸೇರಿದ ಏಳು ಶಾಸಕರು ಇದ್ದಾರೆ. ಅವರಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಿರಿಯರಾಗಿದ್ದು, ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ನಮ್ಮ ಸಮುದಾಯದ ಬೇಡಿಕೆಯೂ ಆಗಿದೆ. ಅವರು ಸಚಿವರಾಗಿ ನಡೆಸಿದ ಆಡಳಿತವನ್ನು ಇಡೀ ರಾಜ್ಯದ ಜನತೆ ನೋಡಿದೆ. ಯಾವುದೇ ಕಪ್ಪು ಚುಕ್ಕೆ ಇಲ್ಲದ ನಿಷ್ಕಳಂಕ ರಾಜಕಾರಣಿ ಎಂದು ತಿಳಿಸಿದರು.

ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಆರ್‌ಎಸ್‌ಎಸ್‌ ಹಿನ್ನೆಲೆ ಕೂಡ ಇದೆ. ಮುಖ್ಯಮಂತ್ರಿ ಸ್ಥಾನವನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ. ಹೀಗಾಗಿ ನಮ್ಮ ಸಮುದಾಯಕ್ಕೇ ಕೊಡಬೇಕು ಎಂದು ಒತ್ತಾಯಿಸಿದರು.

ADVERTISEMENT

‘ನಮ್ಮ ಸಮುದಾಯಕ್ಕೆ ತುಂಬಾ ಅನ್ಯಾಯವಾಗಿದೆ. 80 ಲಕ್ಷ ಜನಸಂಖ್ಯೆ ಇರುವ ಆರ್ಯ ಈಡಿಗ ಸಮುದಾಯಕ್ಕೆ ನಿಗಮ ಮಂಡಳಿಯನ್ನೇ ಘೋಷಣೆ ಮಾಡಿಲ್ಲ. ಸೇಂದಿ ಇಳಿಸಿ, ಮಾರಾಟ ಮಾಡುವ ಸಮುದಾಯ ನಮ್ಮದು. ಸೇಂದಿ ನಿಷೇಧಿಸಿದ ನಂತರ ಪರ್ಯಾಯ ವ್ಯವಸ್ಥೆಯನ್ನೇ ಕಲ್ಪಿಸಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭಾ ಚುನಾವಣೆಯಲ್ಲಿ 1 ಲಕ್ಷ ಮತಗಳ ಅಂತರದಿಂದ ಸೋಲಿಸಿದ ಧೀಮಂತ ನಾಯಕ ಮಾಲೀಕಯ್ಯ ಗುತ್ತೇದಾರ್‌ ಅವರಿಗೆ ‘ಬಿಜೆಪಿ ರಾಜ್ಯ ಉಪಾಧ್ಯಕ್ಷ’ ಸ್ಥಾನ ಕೊಟ್ಟು, ಓಲೈಕೆ ಮಾಡುವ ಯತ್ನ ಮಾಡಿದ್ದಾರೆ ಎಂದು ಕಿಡಿಕಾರಿದರು.

ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ನಮ್ಮ‌ಸಮುದಾಯವನ್ನು ಕಡೆಗಣಿಸಿದರೆ, ತಾ.ಪಂ, ಜಿ.ಪಂ. ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.