ADVERTISEMENT

ಉದಾಸಿಯೇ ನನ್ನ ಗಾಡ್‌ಫಾದರ್‌: ಕಂಬನಿ ಮಿಡಿದ ಸಚಿವ ಬೊಮ್ಮಾಯಿ

ತಂದೆ ಕಳೆದುಕೊಂಡಂತೆ ದುಃಖವಾಗಿದೆ: ಕಂಬನಿ ಮಿಡಿದ ಸಚಿವ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 15:36 IST
Last Updated 9 ಜೂನ್ 2021, 15:36 IST
ಶಾಸಕ ಸಿ.ಎಂ. ಉದಾಸಿ ಅವರ ಪಾರ್ಥಿವ ಶರೀರಕ್ಕೆ ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ ಅಂತಿಮ ನಮನ ಸಲ್ಲಿಸಿದರು. ಸಂಸದ ಶಿವಕುಮಾರ ಉದಾಸಿ ಇದ್ದಾರೆ 
ಶಾಸಕ ಸಿ.ಎಂ. ಉದಾಸಿ ಅವರ ಪಾರ್ಥಿವ ಶರೀರಕ್ಕೆ ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ ಅಂತಿಮ ನಮನ ಸಲ್ಲಿಸಿದರು. ಸಂಸದ ಶಿವಕುಮಾರ ಉದಾಸಿ ಇದ್ದಾರೆ    

ಹಾನಗಲ್‌ (ಹಾವೇರಿ): ‘ಸಿ.ಎಂ.ಉದಾಸಿ ಅವರು ಮುತ್ಸದ್ದಿ ರಾಜಕಾರಣಿ, ರಾಜಕೀಯದಲ್ಲಿ ನಮ್ಮ ತಂದೆ ನಂತರ ಅವರು ನನಗೆ ಮಾರ್ಗದರ್ಶಕರಾಗಿದ್ದರು. ರಾಜಕೀಯವಾಗಿ ಅವರೇ ನನ್ನ ಗಾಡ್‍ಫಾದರ್. ಒಂದು ರೀತಿ ತಂದೆಯನ್ನು ಕಳೆದುಕೊಂಡ ನೋವಾಗಿದೆ. ಉದಾಸಿ ಅವರ ಆದರ್ಶಗಳನ್ನು ನಾವು ಪಾಲಿಸಬೇಕಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಭಾವುಕವಾಗಿ ನುಡಿದರು.

ಹಾನಗಲ್‌ ಪಟ್ಟಣದಲ್ಲಿ ಬುಧವಾರ ಶಾಸಕ ಸಿ.ಎಂ ಉದಾಸಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅವರು ಮಾತನಾಡಿದರು.

ಒಬ್ಬ ದಿಟ್ಟ ಹೋರಾಟಗಾರರನ್ನು ಕಳೆದುಕೊಂಡ ನಾವೆಲ್ಲರೂ ಅನಾಥರಾಗಿದ್ದೇವೆ. ಸಿ.ಎಂ. ಉದಾಸಿ ಅವರು ಸಾವು ನನಗೆ ನೋವು ತಂದಿದೆ. ಅತ್ಯಂತ ಸಜ್ಜನ ರಾಜಕಾರಣಿ, ಅಭಿವೃದ್ಧಿಪರ ಚಿಂತಕರು, ಎಂದಿಗೂ ಕೂಡಾ ವೈಯಕ್ತಿಕ ದ್ವೇಷ ಮಾಡದ ಸಜ್ಜನ ಮನುಷ್ಯ. ಸದಾಕಾಲ ಜನರ ಬಗ್ಗೆ ಚಿಂತನೆ, ರೈತರ ಬಗ್ಗೆ ಕಾಳಜಿ ಹೊಂದಿದ್ದವರು ಎಂದು ಹೇಳಿದರು.

ADVERTISEMENT

ಕರ್ನಾಟಕದಲ್ಲಿ ಬೆಳೆ ವಿಮೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದರು. ಜಿಲ್ಲೆಯ ಸಾವಿರಾರು ರೈತರಿಗೆ ಅತಿ ಹೆಚ್ಚು ಬೆಳೆವಿಮೆ ಸಿಗುವಂತೆ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಸ್ಥಾಪನೆಗೆ ಹಾಗೂ ಹಲವಾರು ಯೋಜನೆಗಳನ್ನು ರೂಪಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು.

ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಬೇಡಿಕೆ ಇಟ್ಟವರು ಉದಾಸಿ ಅವರು. ಅವರ ಕೆಲಸದ ಸ್ಫೂರ್ತಿ ವಯಸ್ಸಿಗೆ ಮೀರಿದ್ದು, ಅವರ ದುಡಿಮೆ ನಮಗೆಲ್ಲ ಪ್ರೇರಪಣೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕಂಬನಿ ಮಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.