ADVERTISEMENT

ಸ್ಕಾಲರ್‌ಶಿಪ್‌ಗೆ ಕನ್ನ: ತಪ್ಪಿತಸ್ಥರ ವಿರುದ್ಧ ಕ್ರಮ- ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 13:20 IST
Last Updated 24 ಜೂನ್ 2022, 13:20 IST
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ   

ಹಾವೇರಿ: ‘ಇಲ್ಲಿಯ ಹಾವೇರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದ ತಕ್ಷಣ, ಐವರು ಸರ್ಕಾರಿ ನೌಕರರನ್ನು ಅಮಾನತು ಮಾಡಿದ್ದೇವೆ. ನಿವೃತ್ತ ಪ್ರಾಂಶುಪಾಲ ಸೇರಿದಂತೆ ಆರು ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದೇವೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದೇವೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಈ ಪ್ರಕರಣದಲ್ಲಿ ಯಾವುದೇ ರೀತಿಯ ಒತ್ತಡ ಬಂದರೂ ಮಣಿಯುವುದಿಲ್ಲ. ಸರ್ಕಾರ ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ ಸ್ಕಾಲರ್‌ಶಿಪ್‌ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಹಾವೇರಿ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ’ ಎಂದರು.

ಲೆಕ್ಕಪರಿಶೋಧನೆ:ತಾಂತ್ರಿಕ ಶಿಕ್ಷಣ ಇಲಾಖೆಯ ತನಿಖಾ ತಂಡದಿಂದ ಕಾಲೇಜಿನ ಲೆಕ್ಕಪರಿಶೋಧನೆ ಮಾಡಿಸಲಾಗುತ್ತಿದೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕಿರುವುದರಿಂದ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ತನಿಖಾ ತಂಡ ಇಲಾಖೆಗೆ ‘ಆಡಿಟ್‌ ರಿಪೋರ್ಟ್‌’ ಸಲ್ಲಿಸಿದ ನಂತರ ಯಾವ ರೀತಿ ಅಕ್ರಮ ನಡೆದಿದೆ ಎಂಬುದು ತಿಳಿಯುತ್ತದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಮಾಡಿಸುತ್ತೇವೆ ಎಂದರು.

ADVERTISEMENT

ಕೂಪನ್‌ ಸಿಸ್ಟಂ:ಕಾಲೇಜಿನಲ್ಲಿ ನಡೆದ ಅವ್ಯವಹಾರ ಪ್ರಕರಣ ನಮ್ಮ ಸರ್ಕಾರ ಬರುವುದಕ್ಕೆ ಮುಂಚೆ ನಡೆದಿದೆ. ನಮ್ಮ ಸರ್ಕಾರ ಬಂದ ಮೇಲೆ ಆಧಾರ್ ಲಿಂಕ್‌ ಮಾಡಿಸಿ, ಕಾಲೇಜು ವಿದ್ಯಾರ್ಥಿಗಳ ಅಕೌಂಟಿಗೆ ನೇರವಾಗಿ ಹಣ ಹೋಗುವ ವ್ಯವಸ್ಥೆ (ಡಿಬಿಟಿ) ಅನುಷ್ಠಾನಗೊಳಿಸಿದ್ದೇವೆ. ಮುಂದಿನ ದಿನಗಳಲ್ಲಿ ‘ಕೂಪನ್‌ ಸಿಸ್ಟಂ’ ಜಾರಿಗೊಳಿಸಿ, ಸರ್ಕಾರದಿಂದ ನೀಡುವ ಶುಲ್ಕ ಮರುಪಾವತಿ (Reimbursement) ಮತ್ತು ಸ್ಕಾಲರ್‌ಶಿಪ್‌ ಹಣವನ್ನು ವಿದ್ಯಾರ್ಥಿಯು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು. ಅನ್ಯ ಉದ್ದೇಶಕ್ಕೆ ಬಳಸದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.