ADVERTISEMENT

ಬ್ಯಾಡಗಿ ಸರ್ಕಾರಿ ಪದವಿ ಪೂರ್ವ ಕಾಲೇಜು: ಕಾಂಪೌಂಡ್ ಹಾರಿ ಬರುವ ಕಿಡಿಗೇಡಿಗಳು

ಪ್ರಮೀಳಾ ಹುನಗುಂದ
Published 24 ಆಗಸ್ಟ್ 2025, 6:07 IST
Last Updated 24 ಆಗಸ್ಟ್ 2025, 6:07 IST
ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಳವಡಿಸಿದ್ದ ಪೈಪ್‌ ಒಡೆದಿರುವುದು
ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಳವಡಿಸಿದ್ದ ಪೈಪ್‌ ಒಡೆದಿರುವುದು   

ಬ್ಯಾಡಗಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ. ಭದ್ರತೆಯ ಕೊರತೆಯಿಂದಾಗಿ ಪುಂಡರ ಹಾವಳಿ ಹೆಚ್ಚಿದೆ. ಕಾಲೇಜು ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದರೂ ಅದನ್ನು ಹತ್ತಿ ಬರುತ್ತಿರುವ ಕಿಡಿಗೇಡಿಗಳು, ಕಾಲೇಜು ಆವರಣದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಜೊತೆಗೆ, ಹಲವು ಸಾಮಗ್ರಿಗಳನ್ನು ಕದ್ದೊಯ್ಯುತ್ತಿದ್ದಾರೆ.

ಕಾಲೇಜಿನ ಶೌಚಾಲಯಕ್ಕೆ ಅಳವಡಿಸಿದ ಪೈಪ್‌ ಒಡೆದು ಹಾಕಿದ್ದಾರೆ. ನೆಲ ಮಹಡಿ ಮತ್ತು ಮೊದಲ ಮಹಡಿಯ ಪ್ರಯೋಗಾಲಯಗಳಿಗೆ ಅಳವಡಿಸಿದ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ.

ತಮ್ಮ ಅಕ್ರಮ ಚಟುವಟಿಕೆಗಳ ದೃಶ್ಯಗಳು ಸೆರೆಯಾಗುತ್ತವೆ ಎಂಬ ಕಾರಣಕ್ಕೆ ಕಾಲೇಜು ಆವರಣದಲ್ಲಿರುವ ಸಿ.ಸಿ.ಟಿ.ವಿ. ಕ್ಯಾಮೆರಾವನ್ನೂ ಧ್ವಂಸಗೊಳಿಸಿದ್ದಾರೆ. ಪ್ರಯೋಗಾಲಯದ ಉಪಕರಣಗಳನ್ನು ಹಾಳು ಮಾಡಿದ್ದಾರೆ.

ADVERTISEMENT

ಕಾಲೇಜಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಕೊಂಡರೂ ಒಂದೆರಡು ದಿನದಲ್ಲಿ ಕಿಡಿಗೇಡಿ ಕೃತ್ಯಗಳಿಂದ, ಎಲ್ಲವೂ ಹಾಳಾಗುತ್ತಿದೆ. ಇಂಥ ಕಿಡಿಗೇಡಿಗಳನ್ನು ಮಟ್ಟ ಹಾಕಲು ಪೊಲೀಸರು ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ಶೌಚಾಲಯಗಳ ಕೊರತೆ: ಕಾಲೇಜಿನ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನೀರಿಂಗ್‌ ಉಪ ವಿಭಾಗದಿಂದ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದ್ದು, ಅದು ಸಹ ಅವೈಜ್ಞಾನಿಕವೆಂಬ ಆರೋಪ ವ್ಯಕ್ತವಾಗುತ್ತಿದೆ.

ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳನ್ನು ಹೊಂದಿರುವ ಕಾಲೇಜಿನ ಪ್ರಥಮ ವರ್ಷದಲ್ಲಿ 80 ಬಾಲಕಿಯರು– 57 ಬಾಲಕರು, ದ್ವಿತೀಯ ಪಿಯುಸಿಯಲ್ಲಿ 64 ಬಾಲಕಿಯರು– 41 ಬಾಲಕರಿದ್ದಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ.

‘ಕಾಲೇಜಿನಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ವಿದ್ಯಾರ್ಥಿಗಳ ಅಗತ್ಯತೆಗೆ ತಕ್ಕಂತೆ ಸೌಕರ್ಯ ಒದಗಿಸಬೇಕು’ ಎಂದು ಪೋಷಕರು ಆಗ್ರಹಿಸಿದರು.

‘ಬಾಲಕಿಯರ ಸಂಖ್ಯೆಗೆ ಅಗತ್ಯವಾಗಿರುವ ಸುರಕ್ಷಿತ ಸ್ಥಳದಲ್ಲಿ ಶೌಚಾಲಯ ನಿರ್ಮಿಸಿ, ಅವರ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿದೆ’ ಎಂದು ಮಾಜಿ ಸೈನಿಕ ರಾಜಶೇಖರ ಹೊಸಳ್ಳಿ ಒತ್ತಾಯಿಸಿದರು.

ಸಭೆ ನಡೆಸಿ ಚರ್ಚೆ: ‘ಕಾಲೇಜು ಅಭಿವೃದ್ಧಿ ಸದಸ್ಯರ ಸಭೆಯನ್ನು ಸದ್ಯದಲ್ಲೇ ನಡೆಸಲಾಗುವುದು. ಕಿಡಿಗೇಡಿಗಳ ಹಾವಳಿ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುವುದು. ಕಾಲೇಜು ಆವರಣದಲ್ಲಿ ಬೆಳಕಿನ ವ್ಯವಸ್ಥೆ ಮಾಡಿಸುವಂತೆ ಪುರಸಭೆಯನ್ನು ಕೋರಲಾಗುವುದು. ಭದ್ರತೆ ಒದಗಿಸಲು ಪೊಲೀಸರಲ್ಲಿ ಮನವಿ ಮಾಡಲಾಗುವುದು. ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದತ್ತು ಸಾಳುಂಕೆ ತಿಳಿಸಿದರು. 

ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಯೋಗಾಲಯದ ಕಿಟಕಿ ಗಾಜು ಒಡೆದಿರುವುದು

‘ಮತ್ತೆ ಕಿಡಿಗೇಡಿಗಳ ಉಪಟಳ’

‘ಕಾಲೇಜಿನ ಸಿ.ಸಿ.ಟಿ.ವಿ. ಕ್ಯಾಮೆರಾ ಒಡೆದಿದ್ದ ಕಿಡಿಗೇಡಿಗಳನ್ನು ಒಮ್ಮೆ ಪೊಲೀಸರಿಗೆ ಹಿಡಿದುಕೊಟ್ಟಿದ್ದೆವು. ಈಗ ಮತ್ತೆ ಕಿಡಿಗೇಡಿಗಳ ಉಪಟಳ ಮುಂದುವರಿದಿದೆ’ ಎಂದು ಪ್ರಾಂಶುಪಾಲ ಮಾಲತೇಶ ಬಂಡೆಪ್ಪನವರ ತಿಳಿಸಿದರು.

‘ಕಾಲೇಜು ಹಿಂದಿನ ಭಾಗದಲ್ಲಿ ಸಂಗ್ರಹವಾಗಿರುವ ಕಸದ ವಿಲೇವಾರಿಗೆ ಪುರಸಭೆಗೆ ಮನವಿ ಸಲ್ಲಿಸಲಾಗಿದೆ. ಶಾಲಾ ಆವರಣದಲ್ಲಿ ಹೈಮಾಸ್ಟ್‌ ವಿದ್ಯುತ್‌ ದೀಪ ಅಳವಡಿಸಿ ಕಿಡಿಗೇಡಿಗಳ ಹಾವಳಿ ತಪ್ಪಿಸಲು ಕೋರಲಾಗಿದೆ. ಕಾಲೇಜಿನ ಭದ್ರತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.