ADVERTISEMENT

ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಬದ್ಧ: ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ

ಸೈನಿಕರು, ಅಂಗವಿಕಲರಿಗೆ ಉಚಿತ ಸದಸ್ಯತ್ವ:

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 16:21 IST
Last Updated 8 ಡಿಸೆಂಬರ್ 2021, 16:21 IST
ಹಾವೇರಿ ನಗರದ ಹುಕ್ಕೇರಿಮಠದಲ್ಲಿ ಬುಧವಾರ ಏರ್ಪಡಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರ ಸೇವಾ ಸ್ವೀಕಾರ ಸಮಾರಂಭದಲ್ಲಿ ಕಸಾಪ ನೂತನ ಅಧ್ಯಕ್ಷ ಡಾ.ಮಹೇಶ ಜೋಶಿ ಅವರನ್ನು ಸನ್ಮಾನಿಸಲಾಯಿತು. ಬಸವಶಾಂತಲಿಂಗ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಲಿಂಗಯ್ಯ ಹಿರೇಮಠ ಇದ್ದಾರೆ 
ಹಾವೇರಿ ನಗರದ ಹುಕ್ಕೇರಿಮಠದಲ್ಲಿ ಬುಧವಾರ ಏರ್ಪಡಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರ ಸೇವಾ ಸ್ವೀಕಾರ ಸಮಾರಂಭದಲ್ಲಿ ಕಸಾಪ ನೂತನ ಅಧ್ಯಕ್ಷ ಡಾ.ಮಹೇಶ ಜೋಶಿ ಅವರನ್ನು ಸನ್ಮಾನಿಸಲಾಯಿತು. ಬಸವಶಾಂತಲಿಂಗ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಲಿಂಗಯ್ಯ ಹಿರೇಮಠ ಇದ್ದಾರೆ    

ಹಾವೇರಿ: ‘ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂಬುದು ಕನ್ನಡಿಗರ ಆಶಯವಾಗಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆಯ ಮೇಲೆ ಉದ್ಯೋಗ ನೀಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ಕೇವಲ ರಾಜಕೀಯ ಭರವಸೆಯಾಗಿ ಉಳಿಯದಂತೆ, ಕಸಾಪ ಸರ್ಕಾರದ ಹಿಂದೆ ಬಿದ್ದು ಅನುಷ್ಠಾನಕ್ಕೆ ಕ್ರಮ ವಹಿಸುತ್ತದೆ’ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಬುಧವಾರ ಏರ್ಪಡಿಸಿದ್ದ ಕಸಾಪ ನೂತನ ಅಧ್ಯಕ್ಷರ ಅಭಿನಂದನಾ ಸಮಾರಂಭ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರ ಸೇವಾ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ಅನ್ನದ ಭಾಷೆಯಾಗಬೇಕು, ಬದುಕಿನ ಭಾಷೆಯಾಗಬೇಕು ಮತ್ತು ಉದ್ಯೋಗ ಕಲ್ಪಿಸುವ ಭಾಷೆಯಾಗಬೇಕು ಎಂಬ ಆಶಯದೊಂದಿಗೆ ಕಸಾಪ ನಿಬಂಧನೆಗಳನ್ನು ಪರಿಷ್ಕರಣೆ ಮಾಡಲಾಗುವುದು. ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ರಾಜ್ಯದಲ್ಲಿ ನಡೆಸುವಾಗ ತ್ರಿಭಾಷಾ ಸೂತ್ರ ಪಾಲಿಸಬೇಕು. ಕೇಂದ್ರ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದರು.

ADVERTISEMENT

ಸರ್ಕಾರದ ಜತೆ ಅನಗತ್ಯವಾಗಿ ಘರ್ಷಣೆಗೆ ಇಳಿಯುವುದಿಲ್ಲ. ಸೌಹಾರ್ದಯುತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತೇವೆ. ಕನ್ನಡಕ್ಕೆ ಧಕ್ಕೆಯಾದರೆ, ಕಸಾಪ ಮತ್ತು ಕನ್ನಡಿಗರ ಪರವಾಗಿ ಹೋರಾಟಕ್ಕೂ ಹಿಂಜರಿಯುವುದಿಲ್ಲ. ಕಸಾಪವನ್ನು ಶುದ್ಧೀಕರಣ, ಸರಳೀಕರಣ ಮಾಡಿ ಉನ್ನತೀಕರಣಕ್ಕೆ ಕ್ರಮವಹಿಸುತ್ತೇನೆ. ಹೊಸ ಮನ್ವಂತರ ಸೃಷ್ಟಿಯಾಗಲಿದೆ ಎಂದು ಭರವಸೆ ನೀಡಿದರು.

ಪರಿಪೂರ್ಣ ಭಾಷೆ: ಪ್ರಾಚೀನತೆ, ಸ್ವಂತ ಭಾಷೆ, ಸ್ವಂತ ಲಿಪಿ, ಸ್ವಂತ ವ್ಯಾಕರಣ ಹೊಂದಿರುವ ಕನ್ನಡವು ತನ್ನದೇ ಆದ ಅಸ್ಮಿತೆಯನ್ನು ಹೊಂದಿದೆ. ಕನ್ನಡ, ಸಂಸ್ಕೃತ ಮತ್ತು ಗ್ರೀಕ್‌ ಈ ಮೂರು ಭಾಷೆಗಳು ಮಾತ್ರ ಜಗತ್ತಿನ ಪರಿಪೂರ್ಣ ಭಾಷೆಗಳು ಎನಿಸಿವೆ. ಕನ್ನಡ ಸಾಯುವ ಭಾಷೆಯಲ್ಲ. ಹೀಗಾಗಿ ಕನ್ನಡವನ್ನು ‘ಉಳಿಸಿ’ ಎಂದು ಹೇಳುವ ಬದಲು ಕನ್ನಡವನ್ನು ‘ಬೆಳೆಸಿ’ ಎಂದು ಹೇಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

1 ಕೋಟಿ ಸದಸ್ಯತ್ವದ ಗುರಿ:
ಸೈನಿಕರು ಹಾಗೂ ಅಂಗವಿಕಲರ ಮನೆ ಬಾಗಿಲಿಗೆ ಹೋಗಿ ಗೌರವಯುತವಾಗಿ ಯಾವುದೇ ಶುಲ್ಕ ಪಡೆಯದೆ ಕಸಾಪ ಸದಸ್ಯತ್ವ ನೀಡುವ ಗುರಿ ಹಾಕಿಕೊಂಡಿದ್ದೇವೆ. ಸದಸ್ಯತ್ವ ಪಡೆಯಲು ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯನ್ನು ಮಾನದಂಡ ಮಾಡಲಿದ್ದೇವೆ. ಸದಸ್ಯತ್ವ ಶುಲ್ಕವನ್ನು ₹250ಕ್ಕೆ ಇಳಿಸಿದ್ದೇವೆ. ಒಂದು ಕೋಟಿ ಸದಸ್ಯತ್ವದ ಗುರಿ ಹೊಂದಿದ್ದೇವೆ ಎಂದರು.

ತಂತ್ರಜ್ಞಾನದ ಬಳಕೆ: ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌ ಎಂ.ವಿ.ವಿಶ್ವೇಶ್ವರಯ್ಯ, ಸರ್‌ ಮಿರ್ಜಾ ಇಸ್ಮಾಯಿಲ್‌ ಮುಂತಾದವರು ಕಸಾಪಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕಸಾಪದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಐತಿಹಾಸಿಕ ಸಾಹಿತ್ಯ ಸಮ್ಮೇಳನಕ್ಕೆ ಕ್ರಮ
‘ಕಸಾಪ ಅಧ್ಯಕ್ಷನಾದ ನಾನು ಹಾವೇರಿಯವನು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹಾವೇರಿಯವರು. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತೇರು ಎಳೆಯಲು ಜಿಲ್ಲೆಯವರಿಗೆ ಸಾರಥ್ಯ ಸಿಕ್ಕಿರುವುದು ದೈವ ಸಂಕಲ್ಪ’ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು.

ಜನರ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು, ಕೊರೊನಾ ಮುಗಿದ ತಕ್ಷಣ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿಪಡಿಸಲಾಗುವುದು. ಐತಿಹಾಸಿಕ ಸಮ್ಮೇಳನ ಮಾಡಲು ಸರ್ವ ರೀತಿಯಲ್ಲೂ ಸಿದ್ಧತೆ ನಡೆಸುತ್ತೇವೆ ಎಂದರು.

ಸಮಾರಂಭದಲ್ಲಿಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಅವರು ಅಧಿಕಾರ ಹಸ್ತಾಂತರಿಸಿದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ವೈ.ಬಿ.ಆಲದಕಟ್ಟಿ, ಸಾಹಿತಿಗಳು, ಕನ್ನಡಾಭಿಮಾನಿಗಳು, ದತ್ತಿ ದಾನಿಗಳು ಇದ್ದರು.

*
ಬಾಲ್ಯದಲ್ಲಿದ್ದಾಗ ಬೊಮ್ಮನಹಳ್ಳಿ ಅನ್ನ ಹಾಕಿದೆ. ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಅತಿ ಹೆಚ್ಚು ಮತಗಳನ್ನು ನೀಡಿದೆ. ತವರು ಜಿಲ್ಲೆಯ ಋಣ ದೊಡ್ಡದು
– ಡಾ.ಮಹೇಶ ಜೋಶಿ, ಕಸಾಪ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.