ADVERTISEMENT

ರೈತನಿಗೆ ₹21 ಸಾವಿರ ಪರಿಹಾರ ನೀಡಿ

ಶಿರಸಿಯ ಐಸಿಐಸಿಐ ಬ್ಯಾಂಕ್‌ ಶಾಖೆಗೆ ಗ್ರಾಹಕರ ಆಯೋಗ ಆದೇಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 14:58 IST
Last Updated 24 ಸೆಪ್ಟೆಂಬರ್ 2021, 14:58 IST
ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಟ್ಟಡ 
ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಟ್ಟಡ    

ಹಾವೇರಿ: ಪ್ರಧಾನಮಂತ್ರಿ ಫಸಲ್‌ ವಿಮಾ ಯೋಜನೆ ಪ್ರೀಮಿಯಂ ಮೊತ್ತದ ವ್ಯತ್ಯಾಸದ ಪರಿಹಾರ ₹21,916ಗಳನ್ನು 30 ದಿನದೊಳಗಾಗಿ ರೈತನಿಗೆ ಪಾವತಿಸುವಂತೆ ಶಿರಸಿ ಐ.ಸಿ.ಐ.ಸಿ.ಐ ಬ್ಯಾಂಕ್ ಶಾಖೆಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಹಾನಗಲ್ ತಾಲ್ಲೂಕು ಹೇರೂರ ಗ್ರಾಮದ ಚಂದ್ರಗೌಡ ವಿರೂಪಾಕ್ಷಪ್ಪ ಪಾಟೀಲ ಅವರು ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ತಮ್ಮ 3.23 ಎಕರೆ ಜಮೀನಲ್ಲಿ ಭತ್ತ (ನೀರಾವರಿ) ಬೆಳೆಯಲು 2017-18ರಲ್ಲಿ ಶಿರಸಿ ಐ.ಸಿ.ಐ.ಸಿ.ಐ ಬ್ಯಾಂಕ್ ಶಾಖೆಯಲ್ಲಿ ₹6 ಲಕ್ಷ ಸಾಲ ಪಡೆದಿದ್ದರು. ಸಾಲದ ಹಣದಲ್ಲಿ ಬೆಳೆವಿಮೆ ಪ್ರೀಮಿಯಂ ಕಡಿತ ಮಾಡುವ ಸಂದರ್ಭದಲ್ಲಿ ನೀರಾವರಿ ಭತ್ತದ ಬದಲಾಗಿ ನೀರಾವರಿ ಗೋವಿನ ಜೋಳದ ಮೇಲೆ ಪ್ರೀಮಿಯಂ ಹಣ ಕಳುಹಿಸಿ ಸೇವಾ ನ್ಯೂನತೆ ಎಸಗಿದ್ದರಿಂದ ಬೆಳೆ ವಿಮಾ ಪರಿಹಾರ ಮೊತ್ತ ₹23,978 ಪಡೆಯಲು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯೆ ಮಹೇಶ್ವರಿ ಬಿ.ಎಸ್. ಅವರು ಅಂಕಿಸಂಖ್ಯಾ ಶಾಸ್ತ್ರ ಇಲಾಖೆ ಪ್ರಕಾರ ಶೇ 28.30ರಷ್ಟು ಬೆಳೆ ಹಾನಿ ಪ್ರಕಾರ ₹21,916, ಪ್ರಕರಣದ ಖರ್ಚು ₹1 ಸಾವಿರ ಹಾಗೂ ಮಾನಸಿಕ ಮತ್ತು ದೈಹಿಕ ತೊಂದರೆಗಾಗಿ ₹2 ಸಾವಿರ ಪಾವತಿಸಲು ಆದೇಶ ಹೊರಡಿಸಿದ್ದಾರೆ.

ADVERTISEMENT

ಆದೇಶವಾದ 30 ದಿನಗಳಲ್ಲಿ ಮೊತ್ತ ಪಾವತಿಸಲು ವಿಫಲವಾದರೆ ವಾರ್ಷಿಕ ಶೇ 9ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.