ADVERTISEMENT

ಶಾಸಕ ಆರ್. ಶಂಕರ್ ಹುಡುಕಿ ಕೊಡಿ: ಪೊಲೀಸ್‌ ಠಾಣೆಗೆ ರೈತ ಮುಖಂಡನ ದೂರು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 13:07 IST
Last Updated 28 ಡಿಸೆಂಬರ್ 2018, 13:07 IST
ಆರ್‌.ಶಂಕರ್, ಶಾಸಕರು ರಾಣೆಬೆನ್ನೂರು
ಆರ್‌.ಶಂಕರ್, ಶಾಸಕರು ರಾಣೆಬೆನ್ನೂರು   

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ಕ್ಷೇತ್ರದ ಶಾಸಕ ಆರ್‌.ಶಂಕರ್ ಅವರನ್ನು ಹುಡುಕಿ ಕೊಡಿ ಎಂದುರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ನಗರ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

‘ಅನೇಕ ದಿನಗಳಿಂದ ಕ್ಷೇತ್ರದಿಂದ ಕಾಣೆಯಾಗಿದ್ದಾರೆ. ಕ್ಷೇತ್ರದ ಜನತೆಗೆಭೇಟಿ ಹಾಗೂ ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಸಾರ್ವಜನಿಕರು ಅವರ ಮನೆಯ ಮುಂದೆ ಕಾದು ಕಾದು ಸುಸ್ತಾಗಿ ಹೋಗಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ಮೇಲೆಯೂ ಕ್ಷೇತ್ರದ ಕಡೆ ಮುಖ ಮಾಡಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಶಾಸಕರು ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ಜನತೆ ಶಾಸಕರ ಬಗ್ಗೆ ರೋಸಿಹೋಗಿದ್ದಾರೆ. ಅಧಿಕಾರಿಗಳು ಕಡತಗಳನ್ನು ಹಿಡಿದುಕೊಂಡು ಶಾಸಕರಿಗಾಗಿ ಕಾಯುತ್ತಿದ್ದಾರೆ.ಕ್ಷೇತ್ರದ ಅಭಿವೃದ್ದಿ ಕುಂಠಿತವಾಗಿದೆ. ತಾಲ್ಲೂಕಿನ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆ ನಡೆದಿಲ್ಲ. ತಾಲ್ಲೂಕು ಬರಗಾಲ ಪೀಡಿತವಾಗಿದ್ದರೂ, ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆದಿಲ್ಲ. ಕುಡಿಯುವ ನೀರಿನ ಸಮಸ್ಯೆಯಿಂದ ಜನತೆ ಕಂಗಾಲಾಗಿದ್ದಾರೆ. ಕೆಲಸ ಇಲ್ಲದೇ ಗುಳೆ ಹೋಗುವಂತಾಗಿದೆ. ಹೀಗಾಗಿ, ಪೊಲೀಸರು ಶಾಸಕರನ್ನು ಹುಡುಕಿಕೊಟ್ಟರೆ ಅನುಕೂಲವಾಗುತ್ತದೆ. ದಯವಿಟ್ಟು ಪೊಲೀಸರು ನಮ್ಮ ದೂರನ್ನು ನಿರ್ಲಕ್ಷಿಸದೇ ಶಾಸಕರನ್ನು ಹುಡುಕಿ ಕೊಡಬೇಕೆಂದು ಮನವಿ ಮಾಡಿದ್ದಾರೆ.

ADVERTISEMENT

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಕೆಪಿಜೆಪಿಯಿಂದ ಆಯ್ಕೆಯಾಗಿದ್ದ ಆರ್. ಶಂಕರ್ ಅರಣ್ಯ ಸಚಿವರಾಗಿದ್ದರು. ಈಚೆಗೆ ನಡೆದ ಸಚಿವ ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ದೂರಿನ ಕುರಿತ ಪ್ರತಿಕ್ರಿಯೆಗಾಗಿ ‘ಪ್ರಜಾವಾಣಿ’ ಶಾಸಕರನ್ನು ಸಂಪರ್ಕಿಸಲು ಯತ್ನಿಸಿದರೂ, ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.