ADVERTISEMENT

ಕಾಂಗ್ರೆಸ್‌ ಅಭಿವೃದ್ಧಿ ವಿರೋಧಿ: ಬಿಜೆಪಿ ಪ್ರಗತಿಗೆ ಪೂರಕ

ಚುನಾವಣಾ ಪ್ರಚಾರ ಸಭೆಯಲ್ಲಿ ಸಂಸದ ಶಿವಕುಮಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:55 IST
Last Updated 11 ಅಕ್ಟೋಬರ್ 2021, 2:55 IST
ಹಾನಗಲ್ ತಾಲ್ಲೂಕಿನ ಬೈಚವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಸಂಸದ ಶಿವಕುಮಾರ ಉದಾಸಿ ಮಾತನಾಡಿದರು
ಹಾನಗಲ್ ತಾಲ್ಲೂಕಿನ ಬೈಚವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಸಂಸದ ಶಿವಕುಮಾರ ಉದಾಸಿ ಮಾತನಾಡಿದರು   

ಹಾನಗಲ್: ‘ಉದಾಸಿ ಕುಟುಂಬಕ್ಕೆ ಟಿಕೆಟ್‌ ಕೈತಪ್ಪಿದ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ ಅಪಪ್ರಚಾರದಲ್ಲಿ ತೊಡಗಿದೆ. ಸಿ.ಎಂ.ಉದಾಸಿ ಆಪ್ತರಾಗಿ ಶಿವರಾಜ ಸಜ್ಜನರ ರಾಜಕಾರಣದಲ್ಲಿ ಬೆಳೆದವರು. ನಮ್ಮ ಕುಟುಂಬದ ಸದಸ್ಯರಾಗಿ ಶಿವರಾಜ ಸಜ್ಜನರ ನಡೆದುಕೊಂಡಿದ್ದಾರೆ’ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ಭಾನುವಾರ ತಾಲ್ಲೂಕಿನ ಬೈಚವಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರ ರಕ್ಷಣೆಗಾಗಿ ನಮ್ಮದೇ ಶಾಸಕರು ಆಯ್ಕೆಗೊಳ್ಳಬೇಕು. ಸಂಸದನಾಗಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದರು.

ಬಿಜೆಪಿ ಕಾರ್ಯಕರ್ತರಲ್ಲಿ ಈ ಚುನಾವಣೆ ಗೆಲ್ಲಬೇಕು ಎಂಬ ಹಂಬಲ ಹೆಚ್ಚುತ್ತಿದೆ. ಇದು ಟ್ರೇಲರ್‌, ಇನ್ಮುಂದೆ ಪಿಚ್ಚರ್‌ ಶುರುವಾಗಲಿದೆ. ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಾಗಾರಿಗಳು ಬಿಜೆಪಿ ಬೆಂಬಲಿಸಲು ಕಾರಣವಾಗಲಿದೆ ಎಂದರು.
ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ವಿಸರ್ಜನೆಯಾಗಬೇಕು, ಕಾಂಗ್ರೆಸ್‌ ಹೆಸರಿನಲ್ಲಿ ಚುನಾವಣೆ ಬೇಡ ಎಂಬುದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅನಿಸಿಕೆಯಾಗಿತ್ತು. ಅದು ಈಗ ನಿಜವಾಗುತ್ತಿದೆ. ಅಭಿವೃದ್ಧಿ ವಿರೋಧಿಯಾಗಿ ಕಾಂಗ್ರೆಸ್‌ ಕಂಗೊಳಿಸುತ್ತಿದೆ. ಪ್ರಗತಿಗೆ ಪೂರಕವಾಗಿ ಬಿಜೆಪಿ ಬೆಳೆದಿದೆ ಎಂದರು.

ADVERTISEMENT

ಅಭ್ಯರ್ಥಿ ಶಿವರಾಜ ಸಜ್ಜನವರ ಮಾತನಾಡಿ, ರಾಜಕೀಯ ರಂಗಕ್ಕೆ ಸಿ.ಎಂ.ಉದಾಸಿ ಅವರು ನನ್ನನ್ನು ಕೈಹಿಡಿ ಕರೆತಂದವರು, ಸಿ.ಎಂ.ಉದಾಸಿ ಶಿಷ್ಯನಾಗಿ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಕ್ಷೇತ್ರದ ಜನರ ಹಿತರಕ್ಷಣೆಗಾಗಿ ಸಂಸದ ಶಿವಕುಮಾರ ಉದಾಸಿ ಅವರು ನಮ್ಮೊಂದಿಗೆ ಇರುತ್ತಾರೆ ಎಂದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಮಾತನಾಡಿ, ಈ ಅವಧಿಯಲ್ಲಿ ಒಬ್ಬ ಶಾಸಕನಾಗಿ ಸಿ.ಎಂ.ಉದಾಸಿ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಅನುದಾನ ತಂದಿದ್ದಾರೆ. ಬೆಳೆವಿಮೆ ಪರಿಹಾರ ಪಡೆಯುವಲ್ಲಿ ದೇಶದಲ್ಲಿ ಹಾನಗಲ್ ತಾಲ್ಲೂಕು ಹೆಸರಾಗಿದೆ. ಇದಕ್ಕೆ ಸಿ.ಎಂ.ಉದಾಸಿ ಕಾರಣ ಎಂದರು.

ಸುರಪೂರ ಶಾಸಕ ರಾಜು ಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದ ಮುಖ್ಯಮಂತ್ರಿ ಈ ಜಿಲ್ಲೆಯವರು. ಇದೇ ತಾಲ್ಲೂಕಿನ ಅಳಿಯ ಅವರು. ಅಲ್ಲದೆ, ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಸಿ.ಎಂ.ಉದಾಸಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಮನವಿ ಮಾಡಿದರು.

ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಮುಖಂಡರಾದ ಕಲ್ಯಾಣಕುಮಾರ ಶೆಟ್ಟರ, ಭೋಜರಾಜ ಕರೂದಿ, ಪದ್ಮನಾಭ ಕುಂದಾಪೂರ, ರವಿ ಪಾಟೀಲ, ಶಿವಾಜಿ ಸಾಳುಂಕೆ, ಶಿವಲಿಂಗಪ್ಪ ತಲ್ಲೂರ, ಡಾ.ಸುನಿಲ ಹಿರೇಮಠ, ರಾಜು ಹೊಸಕೇರಿ ತಿಮ್ಮಾಪೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.