
ವಿರೂಪಾಕ್ಷಪ್ಪ ಬಳ್ಳಾರಿ, ಶಾಸಕ
ಹಾವೇರಿ: ‘ಹಾವೇರಿಯಲ್ಲಿ ಫೆ. 13ರಂದು ಸಾಧನಾ ಸಮಾವೇಶ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಹಕ್ಕುಪತ್ರದ ಹೆಸರಿನಲ್ಲಿ ಬಡವರಿಂದ ಹಣ ಸಂಗ್ರಹಿಸಿ ಅವರ ಜೇಬಿಗೆ ಕತ್ತರಿ ಹಾಕುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ, ಏನಾದರೂ ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.
‘ಹಿಂದಿನ ಯಾವ ಸರ್ಕಾರವೂ ಹಣ ವಸೂಲಿ ಮಾಡಿ ಬಡವರಿಗೆ ಹಕ್ಕುಪತ್ರ ಕೊಟ್ಟಿಲ್ಲ. ಈ ಸರ್ಕಾರ ಮಾತ್ರ ಹಣ ವಸೂಲಿ ಮಾಡುತ್ತಿದ್ದು, ಅದರಲ್ಲೂ ಭ್ರಷ್ಟಾಚಾರ ಆಗುತ್ತಿದೆ. ನಕ್ಷೆ, ನೋಂದಣಿ ಎಲ್ಲದಕ್ಕೂ ಹಣ ಕಿತ್ತುಕೊಳ್ಳುತ್ತಿದ್ದಾರೆ. ಪತ್ರದ ನೋಂದಣಿಗೆ ಪ್ರತಿಯೊಬ್ಬರಿಂದಲೂ ಕಂದಾಯ ಸಂಗ್ರಹಿಸುತ್ತಿದ್ದಾರೆ’ ಎಂದರು.
‘ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದ ಎಲ್ಲಿಯೂ ಒಂದು ಮನೆಯನ್ನೂ ಕೊಟ್ಟಿಲ್ಲ. ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಹಾಗೂ ವಸತಿ ಸಚಿವರು ದೊಡ್ಡ ಕಟೌಟ್ ಹಾಕಿಕೊಂಡು, ಸಮಾವೇಶ ಮಾಡಿದರು’ ಎಂದರು.
ಸರ್ಕಾರದ ಏಜೆಂಟರಾದ ಅಧಿಕಾರಿಗಳು: ‘ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹಲವು ಅಧಿಕಾರಿಗಳು, ಸರ್ಕಾರದ ಏಜೆಂಟರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ದಾವಣಗೆರೆ ಸಿಪಿಐ ಮೇಲೆ ಹಲ್ಲೆ ಮಾಡಿದ್ದಾರೆ. ಜೂಜಾಟದಿಂದಲೂ ಪೊಲೀಸರು ಮಾಮೂಲಿ ಪಡೆದುಕೊಳ್ಳುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಜೂಜಾಟ ಹೆಚ್ಚಾಗಿದೆ. ಮರಳು ದಂಧೆ, ಮಟ್ಕಾ, ಮದ್ಯ ಅಕ್ರಮ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ’ ಎಂದು ಬಳ್ಳಾರಿ ದೂರಿದರು.
‘ಜಿಲ್ಲೆಯಲ್ಲಿ ಹೊಸದಾಗಿ 14 ಮದ್ಯದ ಅಂಗಡಿಗಳನ್ನು ಮಂಜೂರು ಮಾಡಲಾಗಿದೆ. ಬಡವರಿಂದ ವಿವಿಧ ಮಾರ್ಗಗಳಿಂದ ಹಣ ಕಿತ್ತುಕೊಳ್ಳುವ ಹುನ್ನಾರ ಇದಾಗಿದೆ’ ಎಂದು ಹೇಳಿದರು.
ಮುಖಂಡ ಶಿವರಾಜ ಸಜ್ಜನರ ಮಾತನಾಡಿ, ‘ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು. ದೊಡ್ಡ ಮಟ್ಟದ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಆಗ್ರಹಿಸಿದರು.
ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ, ‘ಕಾಂಗ್ರೆಸ್‌ನವರು ಸಮಾವೇಶ ಮಾಡುವ ಮುನ್ನ, ನಗರದ ರಸ್ತೆಗಳನ್ನು ಮೊದಲು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಸಂತೋಷ ಆಲದಕಟ್ಟಿ, ನೀಲಪ್ಪ ಚಾವಡಿ, ವಿಜಯಕುಮಾರ ಚಿನ್ನಿಕಟ್ಟಿ, ಮಂಜುನಾಥ ಮಡಿವಾಳರ, ಕಿರಣ ಕೋಣನವರ, ಮುತ್ತು ಮುಷ್ಠಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.