ADVERTISEMENT

ಹಾವೇರಿ|ಶಾಸಕ ರುದ್ರಪ್ಪ ಕಾರಿಗೆ ಮುತ್ತಿಗೆ: ರಸ್ತೆ, ಚರಂಡಿ ಕಾಮಗಾರಿಗೆ ಜನರ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 5:16 IST
Last Updated 31 ಅಕ್ಟೋಬರ್ 2025, 5:16 IST
ಹಾವೇರಿ ತಾಲ್ಲೂಕಿನ ಕನವಳ್ಳಿ ಗ್ರಾಮದಲ್ಲಿ ಗುರುವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ರುದ್ರಪ್ಪ ಲಮಾಣಿ ಅವರನ್ನು  ಸುತ್ತುವರೆದಿದ್ದ ಕೆಲ ಗ್ರಾಮಸ್ಥರು
ಹಾವೇರಿ ತಾಲ್ಲೂಕಿನ ಕನವಳ್ಳಿ ಗ್ರಾಮದಲ್ಲಿ ಗುರುವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ರುದ್ರಪ್ಪ ಲಮಾಣಿ ಅವರನ್ನು  ಸುತ್ತುವರೆದಿದ್ದ ಕೆಲ ಗ್ರಾಮಸ್ಥರು   

ಹಾವೇರಿ: ‘ಕನವಳ್ಳಿ–ಬೂದಗಟ್ಟಿ ರಸ್ತೆಯ ಅಕ್ಕ–ಪಕ್ಕದ ಚರಂಡಿ ನೀರು ಮಳೆ ಬಂದ ಸಂದರ್ಭದಲ್ಲಿ ಮನೆಗಳಿಗೆ ನುಗ್ಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಸೂಚಿಸಲು ಕಾಮಗಾರಿ ಕೈಗೊಳ್ಳಬೇಕು’ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನವಳ್ಳಿಯ ಕೆಲ ಗ್ರಾಮಸ್ಥರು, ಶಾಸಕ ರುದ್ರಪ್ಪ ಲಮಾಣಿ ಅವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಕನವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಆಯುಷ್ಮಾನ್ ಭವನಕ್ಕೆ ಭೂಮಿ ಪೂಜೆ ಮಾಡಲು ಶಾಸಕ ರುದ್ರಪ್ಪ ಅವರು ಬುಧವಾರ ಗ್ರಾಮಕ್ಕೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಕೆಲ ಗ್ರಾಮಸ್ಥರು, ಕಾರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು.

ಭೂಮಿ ಪೂಜೆ ಮುಗಿಯುತ್ತಿದ್ದಂತೆ ಶಾಸಕರನ್ನು ಸುತ್ತುವರೆದಿದ್ದ ಜನರು, ‘ಗ್ರಾಮದ ಜನರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಅನುದಾನ ಮಂಜೂರಾದರೂ ಕೆಲಸಗಳು ಆಗುತ್ತಿಲ್ಲ. ಸ್ಥಳೀಯ ಗುತ್ತಿಗೆದಾರರೊಬ್ಬರು, ನಿಮ್ಮ ಹೆಸರು (ಶಾಸಕ ರುದ್ರಪ್ಪ ಲಮಾಣಿ) ಹೇಳಿಕೊಂಡು ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡು ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಒಂದೇ ಕೆಲಸಕ್ಕೆ ಮೂರ್ನಾಲ್ಕು ಬಿಲ್ ತೆಗೆದಿರುವ ಆರೋಪವಿದೆ’ ಎಂದು ದೂರಿದರು.

ADVERTISEMENT

‘ಕನವಳ್ಳಿಯಿಂದ ಬೂದಗಟ್ಟಿಗೆ ಹೋಗುವ ಮುಖ್ಯರಸ್ತೆಯ ಅಕ್ಕ–ಪಕ್ಕದಲ್ಲಿ ಮನೆಗಳಿವೆ. ಮಳೆಗಾಲದ ಸಂದರ್ಭದಲ್ಲಿ ಚರಂಡಿ ನೀರು ಮನೆಯೊಳಗೆ ನುಗ್ಗುತ್ತಿದ್ದು, ಪ್ರತಿ ವರ್ಷವೂ ಭಯದಲ್ಲಿ ಕಾಲ ಕಳೆಯುತ್ತಿದ್ದೇವೆ. ಈ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದೇವೆ. ಆದರೆ, ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

ಜನರ ಸಮಸ್ಯೆ ಆಲಿಸಿದ ಶಾಸಕ ರುದ್ರಪ್ಪ, ‘ಗ್ರಾಮಸ್ಥರ ಸಮಸ್ಯೆಗಳು ಗಮನದಲ್ಲಿವೆ. ಸೂಕ್ತ ಅನುದಾನ ತಂದು ಕೆಲಸ ಮಾಡಿಸುತ್ತೇನೆ’ ಎಂದು ಭರವಸೆ ನೀಡಿ, ಕಾರು ಹತ್ತಿ ಸ್ಥಳದಿಂದ ಹೊರಡಲು ಮುಂದಾದರು.

ಕಾರು ಅಡ್ಡಗಟ್ಟಿ ಮುತ್ತಿಗೆ ಹಾಕಿದ ಗ್ರಾಮಸ್ಥರು, ‘ಶಾಸಕರು ನಮ್ಮ ಎಲ್ಲ ಬೇಡಿಕೆಗಳನ್ನು ಕೇಳಬೇಕು. ಇಲ್ಲಿಯೇ ಪರಿಹಾರ ಸೂಚಿಸಬೇಕು’ ಎಂದು ಪಟ್ಟು ಹಿಡಿದರು.

‘ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರು ಹಾಗೂ ಪರಿಶಿಷ್ಟ ಸಮುದಾಯದವರು ಹೆಚ್ಚಿದ್ದಾರೆ. ಕೆಲಸ ಆಗದಿದ್ದರಿಂದ, ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತಿದೆ. ಗ್ರಾಮದಲ್ಲಿರುವ ಒಬ್ಬನೇ ವ್ಯಕ್ತಿ, ಎಲ್ಲ ಕೆಲಸ ಗುತ್ತಿಗೆ ಪಡೆಯುತ್ತಿದ್ದಾನೆ. ಆದರೆ, ಕೆಲಸ ಆಗುತ್ತಿಲ್ಲ’ ಎಂದು ಪುನಃ ದೂರಿದರು. ಕೆಲವರು, ಕಾಂಗ್ರೆಸ್ ಪಕ್ಷದ ವಿರುದ್ಧವೂ ಘೋಷಣೆ ಕೂಗಿದರು. ಸಮಸ್ಯೆ ಈಡೇರಿಕೆಯ ಭರವಸೆ ನೀಡುತ್ತಲೇ ಶಾಸಕ ರುದ್ರಪ್ಪ ಅವರು ಅಲ್ಲಿಂದ ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.