ADVERTISEMENT

ಕಾರ್ಮಿಕನ ₹4 ಲಕ್ಷ ಚಿಕಿತ್ಸಾ ವೆಚ್ಚ ಪಾವತಿಸಲು ವಿಮಾ ನಿಗಮಕ್ಕೆ ಸೂಚನೆ

ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಆದೇಶ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 15:55 IST
Last Updated 17 ಜುಲೈ 2023, 15:55 IST
   

ಹಾವೇರಿ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಕಾರ್ಮಿಕನ ಚಿಕಿತ್ಸಾ ವೆಚ್ಚ ಪಾವತಿಸಲು ಕಾರ್ಮಿಕರ ರಾಜ್ಯ ವಿಮಾ ನಿಗಮಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ. 

ಬ್ಯಾಡಗಿ ತಾಲ್ಲೂಕು ಮಾಸಣಗಿ ಗ್ರಾಮದ ಕುಮಾರಸ್ವಾಮಿ ಹಿರೇಮಠ ಎಂಬುವರಿಗೆ 2015ರಂದು ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾದ ಕಾರಣ ಹುಬ್ಬಳ್ಳಿ ಇಎಸ್‍ಐ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆಗಾಗಿ ಒಟ್ಟು ₹4.43 ಲಕ್ಷ ವೆಚ್ಚ ಮಾಡಲಾಗಿತ್ತು.

ಕಾರ್ಮಿಕರ ರಾಜ್ಯ ವಿಮಾ (ಇಎಸ್‍ಐ) ನಿಗಮದ ಸದಸ್ಯನಾಗಿ ನೋಂದಣಿ ಪಡೆದುಕೊಂಡಿದ್ದ ಕಾರಣ 24 ಆಗಸ್ಟ್ 2016ರಂದು ಚಿಕಿತ್ಸಾ ವೆಚ್ಚ ಕೋರಿ ಕಾರ್ಮಿಕರ ರಾಜ್ಯ ವಿಮಾ ನಿಗಮದ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು. ವಿಮಾ ಸಂಸ್ಥೆ ಚಿಕಿತ್ಸಾ ವೆಚ್ಚ ಪಾವತಿಸಲು ನಿರಾಕರಿಸಿದ ಕಾರಣ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ನಂತರ 2018ರಲ್ಲಿ ಕುಮಾರಸ್ವಾಮಿ ಹಿರೇಮಠ ಮೃತಪಟ್ಟಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್. ಈಶ್ವರಪ್ಪ ಹಾಗೂ ಮಹಿಳಾ ಸದಸ್ಯರಾದ ಉಮಾದೇವಿ ಎಸ್. ಹಿರೇಮಠ ನೇತೃತ್ವದ ತಂಡ, ಚಿಕಿತ್ಸಾ ವೆಚ್ಚದ ಮೊತ್ತ ₹4.43 ಲಕ್ಷ ಹಾಗೂ ಸೇವಾ ನೂನ್ಯತೆಗಾಗಿ ₹ 2 ಸಾವಿರವನ್ನು 30 ದಿನದೊಳಗಾಗಿ ಪಾವತಿಸಲು ಕಾರ್ಮಿಕರ ರಾಜ್ಯ ವಿಮಾ ನಿಗಮಕ್ಕೆ ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 6ರಂತೆ ಬಡ್ಡಿ ಸಮೇತ ಪಾವತಿಸುವಂತೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.