
ಹಾನಗಲ್: ಸಹಕಾರಿ ಕ್ಷೇತ್ರ ಬಲವಾಗಿ ಬೆಳೆಯುತ್ತಿದ್ದು, ಗ್ರಾಮೀಣ ಮಟ್ಟದಲ್ಲಿ ಹಲವಾರು ಸಾಮಾಜಿಕ ಸೇವೆಗಳ ಯೋಜನೆಗಳ ಅನುಷ್ಠಾನಕ್ಕಾಗಿ ಸಹಕಾರಿ ರಂಗದ ನೆರವು ಪಡೆಯುವ ಯೋಚನೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿದ ಅವರು, ರಾಜ್ಯ ಸರ್ಕಾರ ಕೂಡ ರೈತರಿಗೆ ಅನುಕೂಲವಾಗುವ ಯೋಜನೆಗಳಿಗೆ ಸಹಕಾರಿ ಸಂಘಗಳ ಪ್ರಯೋಜನ ಪಡೆಯಲಿದೆ ಎಂದರು.
ವಯಕ್ತಿಕ ಲಾಭದ ಚಿಂತನೆಯುಳ್ಳವರು ಸ್ಥಾಪಿಸಿದ ಸಂಸ್ಥೆಗಳು ಅವನತಿಯಾಗಿವೆ. ಸಹಕಾರಿ ಕ್ಷೇತ್ರವು ಸಾಮಾಜಿಕ ಭದ್ಧತೆಯಾಗಿದ್ದು, ಸೇವಾ ಮನೋಭಾವದ ಜನರಿಂದ ಸಹಕಾರಿ ಕ್ಷೇತ್ರದ ಹುಟ್ಟು ಮತ್ತು ಬೆಳವಣಿಗೆ ಸಾಧ್ಯವಿದೆ ಎಂದರು.
ರಾಜ್ಯದಲ್ಲಿ 6600 ಸಹಕಾರಿ ಸಂಸ್ಥೆಗಳು ನೊಂದಣಿಯಾಗಿವೆ. ಇವುಗಳಲ್ಲಿ 5 ಸಾವಿರ ಸಂಸ್ಥೆಗಳು ಪ್ರಗತಿಯಲ್ಲಿವೆ. ಸದಸ್ಯರು, ಠೇವಣಿದಾರರ ನಂಬಿಕೆ ಉಳಿಸಿಕೊಂಡು ಉದ್ದೇಶಗಳನ್ನು ಈಡೇರಿಸಿಕೊಳ್ಳುವುದು ಸಹಕಾರಿ ಸಂಘದ ಮುಖ್ಯ ಧ್ಯೇಯವಾಗಬೇಕು ಎಂದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ರಾಜು ಗೌಳಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಡೆಯುವ ವಹಿವಾಟಿನ ಮೇಲಿರುವ ವಿಶ್ವಾಸ ಸಹಕಾರಿ ಪತ್ತಿನ ಸಂಘಗಳಲ್ಲಿ ಇಲ್ಲದಿರುವ ಈ ಸಮಯದಲ್ಲಿ ಗ್ರಾಹಕರ ನಂಬಿಕೆ ಉಳಿಸಿಕೊಂಡು ನಮ್ಮ ಸಂಘ ಅಭಿವೃದ್ಧಿಯ ಹಾದಿಯಲ್ಲಿದೆ ಎಂದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಕೆ.ಶಿವಲಿಂಗಪ್ಪ, ಸಹಕಾರಿ ಕ್ಷೇತ್ರದ ಧುರಿಣರಾದ ಎಂ.ಬಿ.ಕಲಾಲ, ಬಿ.ಎಸ್.ಅಕ್ಕಿವಳ್ಳಿ, ಎ.ಎಸ್.ಬಳ್ಳಾರಿ, ಕಲ್ಯಾಣಕುಮಾರ ಶೆಟ್ಟರ, ಎಲ್.ಟಿ.ಪಾಟೀಲ, ವಿಷ್ಣುಕಾಂತ ಜಾಧವ, ಭೋಜರಾಜ ಕರೂದಿ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ ಇದ್ದರು.
ಸಂಘದ ಉಪಾಧ್ಯಕ್ಷ ರಾಮಚಂದ್ರ ಬಮ್ಮನಹಳ್ಳಿ, ನಿರ್ದೇಶಕರಾದ ಗಣೇಶಪ್ಪ ಕೋಡಿಹಳ್ಳಿ, ಶೇಖರ ಜೀವಾಜಿ, ದೀಪಕ ಕಿತ್ತೂರ, ಅರುಣ ಕಿತ್ತೂರ, ಸಂತೋಷ ಟಿಕೋಜಿ, ವಸಂತ ಕಂಕಾಳೆ, ಲಕ್ಷ್ಮೀ ಬಂಕಾಪೂರ, ಆಶಾ ಗೌಳಿ, ಮಂಜುನಾಥ ಕೂಸನೂರ, ಸುನಿಲ ಅರ್ಕಸಾಲಿ, ಮಾರುತಿ ಚಂಚಿಗೊಲ್ಲರ ಹಾಜರಿದ್ದರು.
ಇದಕ್ಕೂ ಮುನ್ನ ನೂತನ ಕಟ್ಟಡದಲ್ಲಿ ನಡೆದ ಹೋಮ, ಪೂಜಾ ಕಾರ್ಯಗಳಲ್ಲಿ ಶಾಸಕ ಶ್ರೀನಿವಾಸ ಮಾನೆ ಮತ್ತು ಮರಾಠ ಪ್ರಾಧಿಕಾರದ ಅಧ್ಯಕ್ಷ ಜಿ.ಎಚ್.ಮರಿಯೋಜಿರಾವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.