ADVERTISEMENT

ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಮಾಡಿ

ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ಗುಂಪು ಚದುರಿಸಿದ ಪೊಲೀಸರು: ಎಸ್ಪಿ ಕೆ.ಜಿ.ದೇವರಾಜು ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 14:41 IST
Last Updated 26 ಮಾರ್ಚ್ 2020, 14:41 IST
ಹಾವೇರಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನ 
ಹಾವೇರಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನ    

ಹಾವೇರಿ:ಕೊರೊನಾ ವೈರಸ್ ಸೋಂಕು ಹರಡುವುದನ್ನುತಡೆಗಟ್ಟುವ ಉದ್ದೇಶದಿಂದ, ಮಾರುಕಟ್ಟೆಯಲ್ಲಿ ತರಕಾರಿಯನ್ನು ಮಾರುವ ಬದಲು ವಾರ್ಡ್‌ಗಳಿಗೆ ಹೋಗಿ ತಳ್ಳುಗಾಡಿಯಲ್ಲಿ ಮಾರಾಟ ಮಾಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಸೂಚನೆ ನೀಡಿದರು.

ನಗರದ ನಾಗರಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ತಿರುಗಬಾರದು. ಜೀವನಾವಶ್ಯ ವಸ್ತುಗಳನ್ನು ಸಮೀಪದ ನಿಗದಿತ ಸ್ಥಳದಲ್ಲಿಯೇ ಖರೀದಿಸಬೇಕು. ಖರೀದಿಗೆ ಬಂದ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.

ಗುಂಪು ಚದುರಿಸಿದ ಪೊಲೀಸರು

ADVERTISEMENT

ನಗರದ ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ಗುರುವಾರ ವಾರದ ಸಂತೆಯಲ್ಲಿ ತರಕಾರಿ ಖರೀದಿಸಲು ಜನರು ಮುಗಿಬಿದ್ದರು. ಜನರು ಗುಂಪುಗೂಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜನರನ್ನು ಚದುರಿಸಲು ಲಾಠಿ ಬೀಸಿದರು. ನಂತರ ಮಳಿಗೆಗಳನ್ನು ತೆರವುಗೊಳಿಸುವಂತೆ ವ್ಯಾಪಾರಸ್ಥರಿಗೆ ತಾಕೀತು ಮಾಡಿದರು. ಮಾರಾಟದಲ್ಲಿ ತೊಡಗಿದ್ದವರನ್ನು ಜಾಗ ಖಾಲಿ ಮಾಡಿಸಿದರು.

ಸಾಮಾಜಿಕ ಅಂತರ

ನಗರದಲ್ಲಿರುವ ವಿವಿಧ ದಿನಸಿ, ಹಾಲು ಹಾಗೂ ಔಷಧ ಅಂಗಡಿಗಳ ಮುಂದೆ ಮೂರರಿಂದನಾಲ್ಕು ಅಡಿ ಅಂತರದಲ್ಲಿ ನಿಲ್ಲುವಂತೆ ಗೆರೆಗಳನ್ನು ಎಳೆದು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಸಾರ್ವಜನಿಕರು ಸರ್ಕಲ್‌ನಲ್ಲಿ ನಿಂತು ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು.

ತರಕಾರಿ ಬೆಲೆ ಏರಿಕೆ

ಕೊರೊನಾ ವೈರಸ್‌ನಿಂದಾಗಿ ಬೇರೆ ಜಿಲ್ಲೆಗಳಿಂದ ಬರುತ್ತಿದ್ದ ತರಕಾರಿ ಪೂರೈಕೆ ಕಡಿಮೆಯಾಗಿದೆ. ಸ್ಥಳೀಯ ರೈತರು ಬೆಳೆದ ತರಕಾರಿ ಸ್ವಲ್ಪ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿರುವುದರಿಂದ ಸಹಜವಾಗಿ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿ ತೌಸಿಫ್‌ ಕೋಣನತಂಬಗಿ ತಿಳಿಸಿದರು.

ಹಿಂದಿನ ವಾರ ₹10ರಂತೆ ಮಾರಾಟವಾಗುತ್ತಿದ್ದ ಟೊಮೆಟೊ ಈ ವಾರ ₹15 ರಂತೆ ಮಾರಾಟವಾಗುತ್ತಿದೆ. ಈರುಳ್ಳಿ ₹40ರಂತೆ ಹಾಗೂಹೀರೇಕಾಯಿ, ಚವಳಿಕಾಯಿ, ಹಾಗಲಕಾಯಿ, ಬೀನ್ಸ್ ₹60 ರಂತೆ ಮಾರಾಟವಾಗುತ್ತಿದೆ. ಕ್ಯಾಬೇಜ್‌, ನುಗ್ಗೆಕಾಯಿ, ಬದನೆಕಾಯಿ ಹೆಚ್ಚಾಗಿ ಆವಕವಾಗುತ್ತಿದೆ. ಮೆಣಸು, ಸೌತೆಕಾಯಿ, ಡೊಣ್ಣ ಮೆಣಸುಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿದೆ ಎಂದು ಅವರು ವಿವರಿಸಿದರು.

ಬಿಕೋ ಎನ್ನುತ್ತಿರುವ ಮಾರುಕಟ್ಟೆ

ಗುರುವಾರ ಬಂದರೆ ನಗರದ ಎಂ.ಜಿ.ರಸ್ತೆ, ತರಕಾರಿ ಮಾರುಕಟ್ಟೆ, ಹೂವಿನ ಮಾರುಕಟ್ಟೆಯಲ್ಲಿ ಜನ ಗಿಜಿಗುಡುತ್ತಿದ್ದರು. ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ಪ್ರಧಾನಿ ಮೋದಿ ಅವರು ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿರುವುದರಿಂದ ವ್ಯಾಪಾರಿಗಳು ಹಾಗೂ ರೈತರು ಇಲ್ಲದೆ ಮಾರುಕಟ್ಟೆ ಭಣಗುಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.