ADVERTISEMENT

ಹಾವೇರಿ | ಕೋವಿಡ್‌ನಿಂದ ಗುಣಮುಖವಾದ ವ್ಯಕ್ತಿಗೆ ಆತ್ಮೀಯ ಬೀಳ್ಕೊಡುಗೆ

14 ದಿನ ಹೋಂ ಕ್ವಾರಂಟೈನ್‌ನಲ್ಲಿಟ್ಟು ನಿಗಾ: ಸಹೋದರನ ಅಂತಿಮ ವರದಿ ಬಾಕಿ

​ಪ್ರಜಾವಾಣಿ ವಾರ್ತೆ
Published 23 ಮೇ 2020, 13:11 IST
Last Updated 23 ಮೇ 2020, 13:11 IST
ಹಾವೇರಿ ಕೋವಿಡ್‌–19 ಆಸ್ಪತ್ರೆಯಿಂದ ಗುಣಮುಖನಾಗಿ ಹೊರಬಂದ ವ್ಯಕ್ತಿಯನ್ನು ವೈದ್ಯಕೀಯ ಸಿಬ್ಬಂದಿ ಗುಲಾಬಿ ಹೂ ನೀಡಿ ಬೀಳ್ಕೊಟ್ಟರು 
ಹಾವೇರಿ ಕೋವಿಡ್‌–19 ಆಸ್ಪತ್ರೆಯಿಂದ ಗುಣಮುಖನಾಗಿ ಹೊರಬಂದ ವ್ಯಕ್ತಿಯನ್ನು ವೈದ್ಯಕೀಯ ಸಿಬ್ಬಂದಿ ಗುಲಾಬಿ ಹೂ ನೀಡಿ ಬೀಳ್ಕೊಟ್ಟರು    

ಹಾವೇರಿ: ಕೊರೊನಾ ಸೋಂಕಿನಿಂದ 14 ದಿನಗಳಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸವಣೂರು ವ್ಯಕ್ತಿಯು ಗುಣಮುಖನಾಗಿದ್ದಾನೆ. ಹೀಗಾಗಿ ವೈದ್ಯಾಧಿಕಾರಿಗಳು, ನರ್ಸ್‍ಗಳು, ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆಯೊಂದಿಗೆ ಗುಲಾಬಿ ಹೂ ನೀಡಿ ಆತನನ್ನು ಬೀಳ್ಕೊಟ್ಟರು.

ಶನಿವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ಹಾಗೂ ಇತರ ವೈದ್ಯರ ತಂಡ ಸವಣೂರ ತಾಲ್ಲೂಕಿನ ಕೃಷ್ಣ ನಗರದ ನಿವಾಸಿ 40 ವರ್ಷದ P-672 ವ್ಯಕ್ತಿಯನ್ನು ಆಸ್ಪತ್ರೆಯಿಂದ ನಿಯಮಾನುಸಾರ ಬಿಡುಗಡೆಗೊಳಿಸಿ, ಸರ್ಕಾರಿ ಆಂಬುಲೆನ್ಸ್‌ ಮೂಲಕ ಮನೆಗೆ ಕಳುಹಿಸಿಕೊಟ್ಟರು.

ಅಂತಿಮ ವರದಿ ಬಾಕಿ:ಮುಂಬೈನಿಂದ ತನ್ನ ಸಹೋದರ ಹಾಗೂ ಮಗನೊಂದಿಗೆ ಜಿಲ್ಲೆಗೆ ಬಂದಿದ್ದ ಈತನಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಸತತ 14 ದಿನ ವೈದ್ಯರ ತಂಡ ಚಿಕಿತ್ಸೆ ನೀಡಿದ ಫಲವಾಗಿ ಗುಣಮುಖನಾಗಿ ಈಗ ಮನೆಗೆ ತೆರಳಿದ್ದಾನೆ. ಈತನನ್ನು ಮುಂದಿನ 14 ದಿನ ಗೃಹ ಪ್ರತ್ಯೇಕತೆಯಲ್ಲಿರಿಸಿ ನಿಗಾವಹಿಸಲಾಗುತ್ತದೆ. ಇವನೊಂದಿಗೆ ಸಹೋದರನೂ (P-639) ಸೋಂಕಿತನಾಗಿದ್ದು, ಈತನ ಅಂತಿಮ ಲ್ಯಾಬ್ ವರದಿ ಬರಬೇಕಾಗಿದೆ.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಮಾತನಾಡಿ, ಕೊರೊನಾ ವೈರಸ್ಸಿನಿಂದ ಗುಣಮುಖರಾದವರಿಗೆ ಜನರು ಯಾವುದೇ ತೊಂದರೆ ಕೊಡದೆ ಅವರ ಮನಸ್ಸಿಗೆ ನೋವು ಮಾಡದಂತೆ ಸಾಮಾನ್ಯರಂತೆ ಎಲ್ಲರೂ ನೋಡಬೇಕು ಎಂದು ತಿಳಿಸಿದರು.

ಸೋಂಕು ಎದುರಿಸಲು ಸನ್ನದ್ಧ:ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಎಷ್ಟೇ ಬಂದರು ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿ ಬೇಕಾದಂತಹ ವಾರ್ಡ್‌, ಐ.ಸಿ.ಯು ಘಟಕಗಳು ಸೇರಿದಂತೆ ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸೋಂಕಿತ ವ್ಯಕ್ತಿ ಗುಣಮುಖನಾಗಿ ಮನೆಗೆ ತೆರಳಲು ಕೋವಿಡ್ ಆಸ್ಪತ್ರೆಯ ವೈದ್ಯರು, ಜಿಲ್ಲಾಡಳಿತದ ವಿವಿಧ ಇಲಾಖೆಯ ಅಧಿಕಾರಿಗಳ ಸಹಕಾರ ಬಹಳ ಪ್ರಮುಖವಾಗಿದೆ. ಎಲ್ಲರೂ ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ಮಾತನಾಡಿ, ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಕೋವಿಡ್ ಆಸ್ಪತ್ರೆ ಸನ್ನದ್ಧವಾಗಿದೆ. ಸವಣೂರಿನ ಕೃಷ್ಣ ನಗರದ ಸೋಂಕಿತ ವ್ಯಕ್ತಿ ಕೊನೆಯ ವರದಿ ನೆಗೆಟಿವ್‌ ಬಂದು ಸಂಪೂರ್ಣ ಗುಣಮುಖರಾಗಿದ್ದು ನಮಗೆ ತುಂಬಾ ಸಂತಸವಾಗಿದೆ ಎಂದರು.

ಕೋವಿಡ್ ಆಸ್ಪತ್ರೆಯಲ್ಲಿ ಈವರೆಗೆ 6 ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಓರ್ವ ವ್ಯಕ್ತಿ ಗುಣಮುಖನಾಗಿರುವ ಕಾರಣ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಐವರಿಗೆ ಚಿಕಿತ್ಸೆ ಮುಂದುವರಿದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕೃಷ್ಣನಗರ ಹಾಗೂ ಅಂದಲಗಿ ಗ್ರಾಮದ ಸೋಂಕಿತರ ಅಂತಿಮ ವರದಿ ಶೀಘ್ರದಲ್ಲಿಯೇ ಬರಲಿದೆ. ಈ ಇಬ್ಬರು ಗುಣಮುಖರಾಗುವ ಲಕ್ಷಣಗಳಿವೆ ಎಂದು ತಿಳಿಸಿದರು.

ಡಾ.ವಿಶ್ವನಾಥ ಸಾಲಿಮಠ, ಡಾ.ನಿರಂಜನ ಮಾನಿ ಬಣಕಾರ, ಡಾ. ಪರಸಪ್ಪ ತುರಚಿಹಾಳ, ಡಾ.ವಿಠ್ಠಲದಾಸ, ಜಿಲ್ಲಾ ನರ್ಸಿಂಗ್ ಸೂಪರಡೆಂಟ್ ರಾಜೇಶ್ವರಿ ಭಟ್ ಸೇರಿದಂತೆ ವಿವಿಧ ವೈದ್ಯರು, ನರ್ಸಿಂಗ್ ಸ್ಟಾಪ್, ಲ್ಯಾಬ್‍ಟೆಕ್ನಿಷಿಯನ್ಸ್ ಇತರ ವೈದ್ಯಕೀಯೇತರ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.