ADVERTISEMENT

ಮನೆ–ಮನ ಬೆಳಗಿದ ಹಣತೆಗಳು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 16:45 IST
Last Updated 5 ಏಪ್ರಿಲ್ 2020, 16:45 IST
ಹಾವೇರಿಯ ಮಂಜುನಾಥ ನಗರದಲ್ಲಿರುವ ತಾಲ್ಲೂಕು ಕಸಾಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ ಅವರ ಮನೆಯಲ್ಲಿ ಹಣತೆ ಹಚ್ಚಿದ ಯುವತಿಯರು   –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ 
ಹಾವೇರಿಯ ಮಂಜುನಾಥ ನಗರದಲ್ಲಿರುವ ತಾಲ್ಲೂಕು ಕಸಾಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ ಅವರ ಮನೆಯಲ್ಲಿ ಹಣತೆ ಹಚ್ಚಿದ ಯುವತಿಯರು   –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ    

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ, ಜಿಲ್ಲೆಯಾದ್ಯಂತ ಜನರು ಭಾನುವಾರ ತಮ್ಮ ಮನೆಗಳಲ್ಲಿ 9 ಗಂಟೆಗೆ ಸರಿಯಾಗಿ ಹಣತೆಗಳನ್ನು ಬೆಳಗುವ ಮೂಲಕ ವ್ಯಾಪಕ ಬೆಂಬಲ ಸೂಚಿಸಿದರು.

ಕೊರೊನಾ ವೈರಾಣು ಹರಡುವುದನ್ನು ತಡೆಯುವ ಉದ್ದೇಶದಿಂದ ಹೇರಲಾದ ‘ಲಾಕ್‌ಡೌನ್‌’ ಭಾನುವಾರ 9ನೇ ದಿನ ಪೂರ್ಣಗೊಳಿಸಿತು. ಈ ರಾತ್ರಿ ಜನರು ತಮ್ಮ ಮನೆಯ ವಿದ್ಯುತ್‌ ದೀಪಗಳನ್ನು ಆರಿಸಿ,ಮೊಂಬತ್ತಿ, ಟಾರ್ಚ್‌, ಮೊಬೈಲ್‌ ಫೋನ್‌ಗಳ ಫ್ಲ್ಯಾಶ್‌ ಲೈಟ್‌ಗಳನ್ನು ಒಂಬತ್ತು ನಿಮಿಷ ಬೆಳಗಿಸಿದರು.

ಕೊರೊನಾ ವೈರಸ್‌ ಸೋಲಿಸುವ ‘ಸಾಮೂಹಿಕ ದೃಢ ನಿಶ್ಚಯ’ವನ್ನು ಹಣತೆ ಬೆಳಗುವ ಮೂಲಕ ಸಾಬೀತು ಪಡಿಸಿದರು. ಮನೆಯಲ್ಲಿ ಇರುವ ಜನರಲ್ಲಿ ಏಕಾಂಗಿಯಾಗಿದ್ದೇವೆ ಎಂಬ ಭಾವನೆ ಬರಬಾರದು. ದೇಶದ 130 ಕೋಟಿ ಜನರ ಸಾಮೂಹಿಕ ಶಕ್ತಿ ತಮ್ಮಲ್ಲಿ ಇದೆ ಎಂಬುದನ್ನು ತೋರಿಸುವಂತೆ ಮೋದಿ ನೀಡಿದ್ದ ಕರೆಗೆ ಜನರು ಅಭೂತಪೂರ್ವ ಬೆಂಬಲ ಸೂಚಿಸಿದರು.

ADVERTISEMENT

ಬಾಲ್ಕನಿ, ಟೆರೇಸ್‌, ಕಾಂಪೌಂಡ್‌, ಬಾಗಿಲುಗಳ ಮುಂದೆ ಹಚ್ಚಿದ್ದ ಸಾಲು ದೀಪಗಳು ದೀಪಾವಳಿಯನ್ನು ನೆನಪಿಸಿದವು. ಹಾವೇರಿ ನಗರ 9 ಗಂಟೆಗೆ ಕತ್ತಲಲ್ಲಿ ಮುಳುಗಿತು ಎನ್ನುವಷ್ಟರಲ್ಲಿ ನಿಧಾನವಾಗಿ ಹಣತೆಯ ಬೆಳಕು ಕತ್ತಲನ್ನು ನಿವಾರಿಸಿ, ಮನೆ–ಮನಗಳಲ್ಲಿ ಸಂತಸದ ಕಾರಂಜಿಯನ್ನು ಚಿಮ್ಮಿಸಿತು.

ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಆವರಣವನ್ನು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ, ಬಾಗಿಲನ್ನು ಮಾವಿನ ತೋರಣದಿಂದ ಅಲಂಕರಿಸಿ, ಬೇವಿನ ಗೊಂಚಲನ್ನು ತೂಗು ಹಾಕಿದ್ದರು. ವೃದ್ಧರಿಂದ ಹಿಡಿದು ಮಕ್ಕಳವರೆಗೂ ಎಲ್ಲರೂ ದೀಪಗಳನ್ನು ಬೆಳಗುವ ಮೂಲಕ ಸಂಭ್ರಮಿಸಿದರು. ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಹಣತೆಗಳ ವ್ಯಾಪಾರ ಜೋರಾಗಿತ್ತು. ಮೇಣದ ಬತ್ತಿಗಳು ಕೂಡ ಕಿರಾಣಿ ಅಂಗಡಿಗಳಲ್ಲಿ ಭರ್ಜರಿಯಾಗಿ ಮಾರಾಟವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.