ADVERTISEMENT

ಉದ್ಯೋಗ ಖಾತ್ರಿ ಕೆಲಸಕ್ಕಿಲ್ಲ ನಿರ್ಬಂಧ

ನೈಸರ್ಗಿಕ ಸಂಪನ್ಮೂಲ, ಅಂತರ್ಜಲ ರಕ್ಷಣೆಗೆ ಒತ್ತು : ಜಿ.ಪಂ.ಸಿಇಒ ರಮೇಶ ದೇಸಾಯಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 12:14 IST
Last Updated 8 ಏಪ್ರಿಲ್ 2020, 12:14 IST
ರಮೇಶ ದೇಸಾಯಿ 
ರಮೇಶ ದೇಸಾಯಿ    

ಹಾವೇರಿ:ಕೊರೊನಾ ಸೋಂಕು ಹಿನ್ನೆಲೆಯಲ್ಲಿ ‘ಸಾಮಾಜಿಕ ಅಂತರ’ ಕಾಯ್ದುಕೊಂಡು ಮನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ. ಒಂದು ಕಾಮಗಾರಿಯಲ್ಲಿ ಐವರು ಕೂಲಿಕಾರರು ಕೆಲಸ ನಿರ್ವಹಿಸಲು ನಿಬಂಧನೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಕೆಲಸಕ್ಕೆ ಯಾವುದೇ ನಿರ್ಭಂಧವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಹೇಳಿದರು.

ಬುಧವಾರ ಹಾವೇರಿ ವಾರ್ತಾ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಖಾತ್ರಿಯಡಿ ಜಿಲ್ಲೆಯಲ್ಲಿ ನೈಸರ್ಗಿಕ ಸಂಪನ್ಮೂಲ ರಕ್ಷಣೆ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ 65 ವೆಚ್ಚವನ್ನು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಶೇ 20ರಷ್ಟನ್ನು ಅರಣ್ಯೀಕರಣ ಕಾಮಗಾರಿಗೆ ಮೀಸಲಿರಿಸಲಾಗಿದೆ ಎಂದು ಹೇಳಿದರು.

ಜಲಮೂಲಗಳಿಗೆ ಸಂಪರ್ಕ:ನೀರು ಇಂಗಿಸುವಿಕೆ, ಹಸಿರೀಕರಣ, ಭೂ ಫಲವತ್ತತೆ ಹೆಚ್ಚಳಕ್ಕೆ ಆದ್ಯತೆ ನೀಡಿ 12 ಸಾವಿರ ಎಕರೆಯಲ್ಲಿ ಬಂಡಿಂಗ್, ಟ್ರಂಚಿಂಗ್, ಕೃಷಿ ಹೊಂಡ, ಗೋ ಕಟ್ಟೆ, ಜಲ ಮೂಲಗಳ ಪುನಶ್ಚೇತನ, ಕಾಲುವೆಗಳ ನಿರ್ಮಾಣದ ಮೂಲಕ ಜಲ ಮೂಲಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ತಯಾರಿಸಲಾಗಿದೆ ಎಂದರು.

ADVERTISEMENT

ಜಿಲ್ಲೆಯಲ್ಲಿ 2100 ಜಲಮೂಲಗಳನ್ನು ಗುರುತಿಸಲಾಗಿದೆ. ಈ ಪೈಕಿ 618 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಈಗಾಗಲೇ ‘ಜಿಯೋ ಸ್ಪೆಷಿಯಲ್’ ದತ್ತಾಂಶವನ್ನು ಸಂಗ್ರಹಿಸಿ ಯೋಜನೆ ರೂಪಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಉದ್ಯೋಗ ಖಾತ್ರಿ ಅನುದಾನ ಬಳಸಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

32 ಲಕ್ಷ ಮಾನವ ದಿನಗಳ ಸೃಜನೆ: ಪ್ರಸಕ್ತ ಸಾಲಿನಲ್ಲಿ ನರೇಗಾ ಕೂಲಿ ವೆಚ್ಚವನ್ನು ₹275ಕ್ಕೆ ಹೆಚ್ಚಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ 986 ಎನ್.ಎಂ.ಆರ್ ಹಂಚಿಕೆ ಮಾಡಿ ಜನರಿಗೆ ಉದ್ಯೋಗ ನೀಡಲಾಗುತ್ತಿದೆ. ಈಗಾಗಲೇ 54 ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸಗಳು ಆರಂಭವಾಗಿದೆ. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 2.12 ಲಕ್ಷ ನೋಂದಾಯಿತ ಕುಟುಂಬಗಳ 1.98 ಲಕ್ಷ ಜನರಿದ್ದಾರೆ. 2019-20ನೇ ಸಾಲಿನ ಮಾರ್ಚ್ ಅಂತ್ಯಕ್ಕೆ 31.79 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿದೆ. 145.04 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 169 ಶುದ್ಧ ನೀರಿನ ಘಟಕಗಳ ಪೈಕಿ 104 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲವನ್ನೂ ಸುಸ್ಥಿತಿಗೆ ತರಲಾಗಿದೆ. ಉಳಿದಂತೆ 10 ರಿಂದ 20 ಘಟಕಗಳು ಮಾತ್ರ ತಾಂತ್ರಿಕ ತೊಂದರೆ ಒಳಗಾಗಿದ್ದು, ದುರಸ್ತಿ ಕೆಲಸ ನಡೆದಿದೆ ಎಂದು ತಿಳಿಸಿದರು.

ಘನತ್ಯಾಜ್ಯ ಘಟಕಗಳ ನಿರ್ಮಾಣ:ಜಿಲ್ಲೆಯ ಎಲ್ಲ 224 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿಗೆ ಘನತ್ಯಾಜ್ಯ ಘಟಕಗಳ ನಿರ್ಮಾಣಕ್ಕೆ ಜಾಗ ಗುರುತಿಸಲು ಸೂಚನೆ ನೀಡಲಾಗಿದೆ. ಈಗಾಗಲೇ 40 ಗ್ರಾಮ ಪಂಚಾಯಿತಿಗಳಿಗೆ ತಲಾ ₹20 ಲಕ್ಷ ಅನುದಾನ ಸಹ ನೀಡಿದೆ. 10 ರಿಂದ 12 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ವೈಜ್ಞಾನಿಕ ಕಸ ವಿಲೇವಾರಿ ಅನುಷ್ಠಾನಗೊಂಡಿದೆ. ಒಂದು ವರ್ಷದಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ವೈಜ್ಞಾನಿಕ ಮಾದರಿಯಲ್ಲಿ ಕಸ ವಿಂಗಡಿಸಿ ವಿಲೇವಾರಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.