ADVERTISEMENT

ತುಮ್ಮಿನಕಟ್ಟೆಯ ನಾಲ್ವರಿಗೆ ಕೋವಿಡ್‌ ದೃಢ

‘ಸೇವಾ ಸಿಂಧು’ ಪಾಸ್‌ ಪಡೆದು ಜಿಲ್ಲೆಗೆ ಪ್ರವೇಶ: 2 ವರ್ಷದ ಗಂಡು ಮಗುವಿಗೂ ಸೋಂಕು

​ಪ್ರಜಾವಾಣಿ ವಾರ್ತೆ
Published 28 ಮೇ 2020, 14:41 IST
Last Updated 28 ಮೇ 2020, 14:41 IST
ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ 
ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ    

ಹಾವೇರಿ: ಮಹಾರಾಷ್ಟ್ರದಿಂದ ‘ಸೇವಾ ಸಿಂಧು’ ಪಾಸ್ ಪಡೆದು ಹಾವೇರಿ ಜಿಲ್ಲೆಗೆ ಆಗಮಿಸಿದ್ದ ತುಮ್ಮಿನಕಟ್ಟೆ ಮೂಲದ ನಾಲ್ವರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ರಾಣೇಬೆನ್ನೂರು ತಾಲ್ಲೂಕು ತುಮ್ಮಿನಕಟ್ಟಿ ಗ್ರಾಮದವರಾದ 2 ವರ್ಷದ ಗಂಡು ಮಗು (ಪಿ-2494 ), 34 ವರ್ಷದ ಪುರುಷ (ಪಿ-2495 ), 28 ವರ್ಷದ ಮಹಿಳೆ (ಪಿ-2496) ಹಾಗೂ 22 ವರ್ಷದ ಪುರುಷ (ಪಿ-2497) ಇವರಿಗೆ ಗುರುವಾರ ಕೋವಿಡ್–19 ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಪಾಂಡಪಾಡ್ವಾದ ಕಲ್ವಾದಲ್ಲಿ ಬೀದಿ ವ್ಯಾಪಾರ ಮಾಡಿಕೊಂಡಿದ್ದ ಇವರು ‘ಸೇವಾ ಸಿಂಧು’ ಆ್ಯಪ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಎರಡು ಬಸ್‍ಗಳಲ್ಲಿ ಮೇ 16ರಂದು ಮಹಾರಾಷ್ಟ್ರದಿಂದ ಹೊರಟು ಮೇ 17ರಂದು ಬೆಳಗಾವಿಯ ಕೊಂಗನೊಳ್ಳಿ ಚೆಕ್‌ಪೋಸ್ಟ್ ಮಾರ್ಗದಿಂದ ಪ್ರಯಾಣ ಬೆಳೆಸಿ ರಾತ್ರಿ 9.15ಕ್ಕೆ ಹಾವೇರಿ ಜಿಲ್ಲೆ ತಡಸ ಚೆಕ್‍ಪೋಸ್ಟ್‌ಗೆ ಆಗಮಿಸಿದ್ದರು.

ADVERTISEMENT

ಎರಡು ಬಸ್‍ನಲ್ಲಿದ್ದ ಎಲ್ಲ 89 ಜನರನ್ನು ತಡಸ ಚೆಕ್‍ಪೋಸ್ಟ್‌ನಲ್ಲಿ ಆರೋಗ್ಯ ತಪಾಸಣೆ ನಡೆಸಿ ನೇರವಾಗಿ ರಾಣೆಬೆನ್ನೂರು ತಾಲೂಕು ಮಾಕನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 29 ಜನರನ್ನು, ಸರ್ಕಾರಿ ಗಿರಿಜನ ಆಶ್ರಮ ಶಾಲೆಯಲ್ಲಿ 19 ಜನರನ್ನು ಹಾಗೂ ಈಶ್ವರ ನಗರದ ದಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 41 ಜನರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು.

ಮೇ 24ರಂದು ಮಾಕನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇರಿಸಿದ್ದ 29 ಜನರ ಗಂಟಲು ದ್ರವ ಮಾದರಿಯನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಮೇ 28ರಂದು ಬೆಳಿಗ್ಗೆ 10 ಗಂಟೆಗೆ ನಾಲ್ವರಿಗೆ ಕೊರೊನಾ ಸೋಂಕು ದೃಢಗೊಂಡಿರುವ ವರದಿ ಬಂದಿರುತ್ತದೆ. ನಿಗದಿತ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ P-2495 ಗಂಡ ಮತ್ತು P-2496 ಹೆಂಡತಿ ಹಾಗೂ P-2494 ಮಗು ಒಂದೇ ಕುಟುಂಬದವಾಗಿದ್ದಾರೆ.

ಮಾಕನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 100 ಮೀಟರ್ ವ್ಯಾಪ್ತಿಯನ್ನು ಕಂಟೈನ್‌ಮೆಂಟ್‌ ಝೋನ್ ಎಂದು ಘೋಷಿಸಲಾಗಿದೆ ಹಾಗೂ ಬಫರ್ ಝೋನ್ ಎಂದು ಗುರುತಿಸಲಾಗಿದೆ. ಈ ಕಂಟೈನ್‍ಮೆಂಟ್ ಹಾಗೂ ಬಫರ್ ಝೋನ್ ಪ್ರದೇಶಕ್ಕೆ ಇನ್ಸಿಡೆಂಟ್ ಕಮಾಂಡರ್ ಆಗಿ ರಾಣೇಬೆನ್ನೂರ ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ಬಸವನಗೌಡ ಕೊಟೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.