ADVERTISEMENT

ಬ್ಯಾಡಗಿ: ಜಾನುವಾರು ಹತ್ಯೆ ತಡೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:39 IST
Last Updated 6 ಆಗಸ್ಟ್ 2025, 2:39 IST
ಬ್ಯಾಡಗಿ ಪಟ್ಟಣದ ಉಚ್ಚೆಂಗಮ್ಮ ದೇವಸ್ಥಾನ ಬಳಿ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳುವಂತೆ ಆಗ್ರಹಿಸಿ ಶಿವಶರಣ ಹರಳಯ್ಯ ಸಮಾಜದ ಮುಖಂಡರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು
ಬ್ಯಾಡಗಿ ಪಟ್ಟಣದ ಉಚ್ಚೆಂಗಮ್ಮ ದೇವಸ್ಥಾನ ಬಳಿ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳುವಂತೆ ಆಗ್ರಹಿಸಿ ಶಿವಶರಣ ಹರಳಯ್ಯ ಸಮಾಜದ ಮುಖಂಡರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು   
ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆ | ದನ ಮಾಂಸದ ತ್ಯಾಜ್ಯದಿಂದ ದುರ್ವಾಸನೆ | ಭಾಗಿಯಾದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ಬ್ಯಾಡಗಿ: ಹರಳಯ್ಯ ಸಮಾಜದ ಆರಾಧ್ಯ ದೇವತೆಯಾದ ಪಟ್ಟಣದ ಉಚ್ಚೆಂಗಮ್ಮ ದೇವಸ್ಥಾನದ ಬಳಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ಶಿವಶರಣ ಹರಳಯ್ಯ ಸಮಾಜದ ಮುಖಂಡರು ಸೋಮವಾರ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಅವರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ ಸಂಚಾಲಕ, ಸಮಾಜದ ಮುಖಂಡ ಚಂದ್ರಶೇಖರ ಗದಗಕರ ಮಾತನಾಡಿ, ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಸಾವಿರಾರು ಜನ ಭಕ್ತರು ಶನಿವಾರ ಬ್ಯಾಡಗಿ–ಕದರಮಂಡಲಗಿ ರಸ್ತೆ ಮಾರ್ಗವಾಗಿ ಪಾದಯಾತ್ರೆ ಕೈಕೊಳ್ಳುತ್ತಾರೆ. ಈ ಮಾರ್ಗದಲ್ಲಿ ಜಾನುವಾರುಗಳನ್ನು ಕಡಿದು ಎಗ್ಗಿಲ್ಲದೆ ಮಾಂಸ ಮಾರಾಟ ಮಾಡಲಾಗುತ್ತಿದೆ. ಇದರಿಂದ ರಸ್ತೆ ಮೂಲಕ ಹಾಯ್ದು ಹೋಗುವ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಅಲ್ಲದೆ ಉಚ್ಚಂಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಶಾಲೆಗೆ ಹೋಗಿ ಬರುವ ವಿದ್ಯಾರ್ಥಿಗಳು ದನದ ಮಾಂಸ ತ್ಯಾಜ್ಯದಿಂದ ಉಂಟಾಗುವ ದುರ್ವಾಸನೆಯಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾನುವಾರು ಕಡಿಯುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಪುರಸಭೆ ಮಾಜಿ ಸದಸ್ಯ ಮಾರುತಿ ಹಂಜಗಿ ಮಾತನಾಡಿ, ಪಟ್ಟಣದ ಹೊರವಲಯದಲ್ಲಿ ವಧಾಲಯ (ಸ್ಲಾಟರ್ ಹೌಸ್) ನಿರ್ಮಿಸಿದ್ದರೂ ನಿಯಮಗಳನ್ನು ಉಲ್ಲಂಘಿಸಿ ಪಟ್ಟಣದ ಮಧ್ಯ ಭಾಗದಲ್ಲಿ ದನಗಳನ್ನು ಕಡಿದು ಮಾಂಸ ಮಾರುವ ದಂಧೆ ನಡೆಯುತ್ತಿದೆ. ಇದರಲ್ಲಿ ಭಾಗಿಯಾಗಿರುವವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದರು.

ಪಟ್ಣಣದಲ್ಲಿ ನಡೆಯುವ ಜಾನುವಾರ ವಧೆಯನ್ನು ನಿಲ್ಲಿಸಲು ಜನಪ್ರತಿನಿಧಿಗಳು, ಪುರಸಭೆ ಸದಸ್ಯರು ಹಾಗೂ ಪೊಲೀಸ್‌ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಜನರ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ವಕೀಲ ಮಂಜುನಾಥ ಹಂಜಿಗಿ, ಮಂಜುನಾಥ ಗದಗಕರ, ರಾಜು ಪಂಡ್ರಾಪುರ, ಚಮನಪ್ಪ ಅರಕೇರಿ, ಬುದ್ಧಿವಂತ ಹಂಜಗಿ, ಶ್ರೀಮಂತ ಬಾಗಲಕೋಟೆ, ಹನುಮಂತ ಹಂಜಗಿ, ಸುಭಾಷ ಹಂಜಗಿ, ಅಪ್ಪು ಬಾಗಲಕೋಟ, ಈಶ್ವರ ಗದಗಕರ, ಶಿವಪುತ್ರಪ್ಪ ಬೆಟಗೇರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.