ADVERTISEMENT

ತಂಡ ರಚಿಸಿ, ನೀರಿನ ಸಮಸ್ಯೆ ಪರಿಹರಿಸಿ: ಮನೋಜ್ ಜೈನ್ ಸೂಚನೆ

ಕೋವಿಡ್‌ ಲಸಿಕೆ ಹೆಚ್ಚಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 13:48 IST
Last Updated 19 ಮಾರ್ಚ್ 2021, 13:48 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ಮುಂಜಾಗ್ರತಾ ಕ್ರಮಗಳು ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ ಜೈನ್ ನಡೆಸಿದರು
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ಮುಂಜಾಗ್ರತಾ ಕ್ರಮಗಳು ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ ಜೈನ್ ನಡೆಸಿದರು   

ಹಾವೇರಿ: ‘ಜಿಲ್ಲೆಯಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ತಕ್ಷಣ ಸ್ಪಂದಿಸಬೇಕು. ಕೊಳವೆಬಾವಿ ಮೋಟರ್‌ಗಳದುರಸ್ತಿಗೆ ತಾಲ್ಲೂಕುವಾರು ತಂಡ ರಚಿಸಿ, ನಿಗಾವಹಿಸಬೇಕು’ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ ಜೈನ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ಮುಂಜಾಗ್ರತಾ ಕ್ರಮಗಳು ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಆಲಿಸಲು ‘ಸಹಾಯವಾಣಿ’ ತೆರೆದು ತುರ್ತು ದುರಸ್ತಿಗೆ ಪ್ರತ್ಯೇಕ ತಂಡಗಳನ್ನು ರಚಿಸಬೇಕು ಎಂದು ಸಲಹೆ ನೀಡಿದರು.

ಕೊರೊನಾ ತಪಾಸಣೆ:

ADVERTISEMENT

ಕೋವಿಡ್ ಎರಡನೇ ಅಲೆ ಆರಂಭವಾಗಿದೆ. ಬೆಳಗಾವಿ ಮಾರ್ಗದಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರು ಸೇರಿದಂತೆ ಹೊರ ಜಿಲ್ಲೆಯಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು. ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಬೇಕು. ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು ಎಂದರು.

ಕೋವಿಡ್‌ ಲಸಿಕೆ ನೀಡಿಕೆ ಪ್ರಮಾಣವನ್ನು ಹೆಚ್ಚಳ ಮಾಡಬೇಕು. ಈ ಕುರಿತಂತೆ ಜನರಿಗೆ ಜಾಗೃತಿ ಮೂಡಿಸಬೇಕು. ಮೋಟಿವೇಷನ್ ಮೂಲಕ ಸಾರ್ವಜನಿಕರು ಸ್ವ–ಪ್ರೇರಣೆಯಿಂದ ಕೋವಿಡ್ ವ್ಯಾಕ್ಸಿನ್ ಪಡೆಯಲು ಮುಂದಾಗುವಂತೆ ಕ್ರಮವಹಿಸಬೇಕು.

ಮುಂಚೂಣಿ ವಾರಿಯರ್‌ಗಳ ಪೈಕಿ ಪೌರಕಾರ್ಮಿಕರು ಸೇರಿದಂತೆ ಬಹುಪಾಲು ಜನ ಅನಕ್ಷರಸ್ಥರಿದ್ದಾರೆ. ಈ ಜನರಿಗೆ ಎರಡನೇ ಸುತ್ತಿನ ವ್ಯಾಕ್ಸಿನ್ ಪಡೆಯಲು ಖುದ್ದಾಗಿ ಮಾಹಿತಿ ನೀಡಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಸ್ಮಶಾನಭೂಮಿ ಕೊರತೆ ಇರುವ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಗುರುತಿಸಬೇಕು. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನನ್ನು ಗುರುತಿಸಿ ದರ ನಿಗದಿಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಸೂಚನೆ ನೀಡಿದರು.

ಪಿಂಚಣಿ ಸೌಲಭ್ಯ:

ವಿಶೇಷ ಅಭಿಯಾನದ ಮೂಲಕ ಹೊಸದಾಗಿ ಪಿಂಚಣಿ ಪಡೆಯಲು ಅರ್ಹರನ್ನು ಗುರುತಿಸಿ ಪಿಂಚಣಿ ಮಂಜೂರಾತಿಗೆ ಕ್ರಮವಹಿಸಬೇಕು. ಪಿಂಚಣಿ ಪಡೆಯುತ್ತಿರುವವರ ಪೈಕಿ ಮರಣ ಹೊಂದಿದವರನ್ನು ಗುರುತಿಸಿ ಇಂತವರ ಪಿಂಚಣಿ ರದ್ದು ಮಾಡುವ ಕುರಿತಂತೆ ಕ್ರಮವಹಿಸಬೇಕು. ಈ ಕಾರ್ಯ ಕಾಲಮಿತಿಯೊಳಗೆ ಆಗಬೇಕು ಎಂದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ವಿವಿಧ ಇಲಾಖೆ, ನಿಗಮಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.