ಹಾವೇರಿ: ‘ಮುಳ್ಳುಸಜ್ಜೆ ನಿಯಂತ್ರಿಸಬಹುದೆಂದು ಹೇಳಿ ಕಳೆನಾಶಕ ಅಂಶವಿಲ್ಲದ ಉತ್ಪನ್ನ ಮಾರಾಟ ಮಾಡಿ ರೈತರನ್ನು ವಂಚಿಸಿದ್ದ’ ಆರೋಪದಡಿ ನಗರದ ಶ್ರೀನಿವಾಸ್ ಅಗ್ರೊ ಸೆಂಟರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೃಷಿ ಇಲಾಖೆ ಮುಂದಾಗಿದೆ.
‘ಮೆಕ್ಕೆಜೋಳ ಹಾಗೂ ಇತರ ಬೆಳೆಗಳಲ್ಲಿ ಹೆಚ್ಚಾಗಿರುವ ಮುಳ್ಳುಸಜ್ಜೆ ಕಳೆಯನ್ನು ನಿಯಂತ್ರಿಸಲು ಸೂಕ್ತ ಔಷಧ ಲಭ್ಯವಿದೆ’ ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಈಚೆಗೆ ಹರಿದಾಡಿತ್ತು. ಇದನ್ನು ನಂಬಿದ್ದ ರೈತರು, ಔಷಧ ಸಿಗುವುದಾಗಿ ಹೇಳಿದ್ದ ಶ್ರೀನಿವಾಸ್ ಅಗ್ರೊ ಸೆಂಟರ್ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಮುಳ್ಳುಸಜ್ಜೆ ನಿಯಂತ್ರಣದ ಕಳೆನಾಶಕದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿಗಳು, ಶ್ರೀನಿವಾಸ್ ಅಗ್ರೊ ಸೆಂಟರ್‌ಗೆ ಭೇಟಿ ನೀಡಿ ಔಷಧ ಜಪ್ತಿ ಮಾಡಿದ್ದರು. ಅದನ್ನು ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಪ್ರಯೋಗಾಲಯದ ವರದಿ ಬಂದಿದ್ದು, ಸೆಂಟರ್‌ನಲ್ಲಿದ್ದ ಔಷಧದಲ್ಲಿ ಕಳೆನಾಶಕ ಅಂಶವಿಲ್ಲವೆಂದು ಸಾಬೀತಾಗಿದೆ. ಇದೇ ವರದಿ ಆಧರಿಸಿ ಸೆಂಟರ್ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳು ಸಜ್ಜಾಗಿದ್ದಾರೆ.
ಹೊರ ಜಿಲ್ಲೆಗಳ ರೈತರಿಗೆ ಮೋಸ: ಹಾವೇರಿ ಮಾತ್ರವಲ್ಲದೇ ವಿಜಯನಗರ, ಬಳ್ಳಾರಿ, ಶಿವಮೊಗ್ಗ, ವಿಜಯಪುರ, ಬೆಳಗಾವಿ, ಕಲಬುರ್ಗಿ, ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೈತರು ಹಾವೇರಿಗೆ ಬಂದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂದಿದ್ದನ್ನು ಗಮನಿಸಿದ್ದ ಶ್ರೀನಿವಾಸ್ ಅಗ್ರೊ ಸೆಂಟರ್ ಮಾಲೀಕ, ಅಂಗಡಿಗೆ ಬೀಗ ಹಾಕಿದ್ದರು.
ಅಂಗಡಿ ಎದುರು ಸೇರಿದ್ದ ರೈತರು. ಮುಳ್ಳುಸಜ್ಜೆಗೆ ಕೀಟನಾಶಕ ಬೇಕೆಂದು ಪಟ್ಟು ಹಿಡಿದು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ‘ರೈತರಿಗೆ ಅನುಕೂಲವಾಗಲೆಂದು ಅಂಗಡಿಯವರು ಕಳೆನಾಶಕ ನೀಡುತ್ತಿದ್ದಾರೆ. ಅದನ್ನು ಕೊಡಿಸಿ’ ಎಂದು ರೈತರು ವಾದಿಸಿದ್ದರು. ತಿಳಿ ಹೇಳಿದ್ದ ಅಧಿಕಾರಿಗಳು, ‘ಮುಳ್ಳುಸಜ್ಜೆಗೆ ಯಾವುದೇ ಅಧಿಕೃತ ಕಳೆನಾಶಕವಿಲ್ಲ. ಅಂಗಡಿಯವರು ನೀಡುತ್ತಿರುವ ಕಳೆನಾಶಕ, ಮುಳ್ಳಸಜ್ಜೆಗೆ ಸೂಕ್ತವೆಂಬುದು ಖಾತ್ರಿಯಾಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಅಲ್ಲಿಯವರೆಗೂ ರೈತರು ತಾಳ್ಮೆಯಿಂದ ಕಾಯಬೇಕು’ ಎಂದು ಕೋರಿದ್ದರು. ರೈತರನ್ನು ಸಮಾಧಾನಪಡಿಸಿ ಸ್ಥಳದಿಂದ ವಾಪಸು ಕಳುಹಿಸಿದ್ದರು.
ಮುಳ್ಳುಸಜ್ಜೆ ಕಳೆನಾಶಕಕ್ಕೆ ಸಂಬಂಧಕ್ಕೆ ಉಂಟಾಗಿದ್ದ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ. ಮಲ್ಲಿಕಾರ್ಜುನ, ‘ಮುಳ್ಳುಸಜ್ಜೆ ನಿಯಂತ್ರಿಸುವ ಔಷಧ ಶ್ರೀನಿವಾಸ್ ಅಗ್ರೊ ಸೆಂಟರ್‌ನಲ್ಲಿ ಸಿಗುತ್ತದೆ ಎಂಬ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಶ್ರೀನಿವಾಸ್ ಅಗ್ರೊ ಸೆಂಟರ್ ಮಾಲೀಕರಾದ ಗೀತಾ ತಿಪ್ಪೇಶಪ್ಪ ಪೂಜಾರ, ರೈತರಿಗೆ ಬಿಎಎಸ್‌ಎಫ್ ಕಂಪನಿಯ ಟಿಂಝರ್ ಹಾಗೂ ಆಟ್ರಾಜಿನ್ ಜೊತೆಯಲ್ಲಿ ವೀಡ್ ಮಾಸ್ಟರ್ ನೀಡಿದ್ದರು’ ಎಂದಿದ್ದರು.
‘ರೈತರಿಗೆ ಬಿಎಎಸ್‌ಎಫ್ ಕಂಪನಿಯ ಟಿಂಝರ್ ಹಾಗೂ ಆಟ್ರಾಜಿನ್ ಔಷಧಕ್ಕೆ ದಾಖಲೆಗಳಿವೆ. ಆದರೆ, ವೀಡ್ ಮಾಸ್ಟರ್‌ಗೆ ದಾಖಲಾತಿ ಇರಲಿಲ್ಲ. ಹೀಗಾಗಿ, ಅದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು’ ಎಂದು ಹೇಳಿದ್ದರು.
ಪ್ರಕರಣ ದಾಖಲಿಸುವ ಅಧಿಕಾರ: ‘ಶ್ರೀನಿವಾಸ್ ಅಗ್ರೊ ಸೆಂಟರ್‌ನವರು ಮಾರಿದ್ದ ವೀಡ್ ಮಾಸ್ಟರ್ ಉತ್ಪನ್ನದಲ್ಲಿ ಕಳೆನಾಶಕ ಅಂಶವಿಲ್ಲವೆಂಬುದು ಪ್ರಯೋಗಾಲಯದ ವರದಿಯಿಂದ ಖಾತ್ರಿಯಾಗಿದೆ. ಇದನ್ನು ಆಧರಿಸಿ ಸೆಂಟರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
‘ನಾವು ದಾಖಲಿಸಿದ ಪ್ರಕರಣದ ವಿಚಾರಣೆ, ನ್ಯಾಯಾಲಯದಲ್ಲಿ ನಡೆಯುತ್ತದೆ. ಕಳೆನಾಶಕ ಅಂಶವಿಲ್ಲದ ಉತ್ಪನ್ನ ಮಾರಿದ್ದ ಬಗ್ಗೆ ಎಲ್ಲ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇದೇ ಪುರಾವೆಗಳನ್ನು ಆಧರಿಸಿ ಶ್ರೀನಿವಾಸ್ ಅಗ್ರೊ ಸೆಂಟರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಲಿದೆ. ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ, ದಂಡ ಹಾಗೂ ಜೈಲು ಶಿಕ್ಷೆಗೂ ಅವಕಾಶವಿದೆ’ ಎಂದು ತಿಳಿಸಿದರು.
‘ಸಾಮಾಜಿಕ ಮಾಧ್ಯಮದಲ್ಲಿ ಬಂದ ವಿಡಿಯೊ ನೋಡಿಯೇ ರೈತರು ಕಳೆನಾಶಕ ಖರೀದಿಸಿದ್ದಾರೆ. ಹಲವರ ಜಮೀನಿನಲ್ಲಿದ್ದ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಬಂದಿಲ್ಲ. ರೈತರು ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳನ್ನು ನಂಬುವ ಮುನ್ನ ಎಚ್ಚರಿಕೆ ವಹಿಸಬೇಕು’ ಎಂದರು.
ಸಾಮಾಜಿಕ ಮಾಧ್ಯಮದಲ್ಲಿದ್ದ ವಿಡಿಯೊ ಕಳೆನಾಶಕ ಖರೀದಿಸಲು ಮುಗಿಬಿದ್ದಿದ್ದ ರೈತರು |ಕಳೆನಾಶಕವಿಲ್ಲವೆಂದ ಪ್ರಯೋಗಾಲಯ
ಕಳೆನಾಶಕ ಅಂಶವಿಲ್ಲದ ಉತ್ಪನ್ನ ಮಾರಿ ರೈತರನ್ನು ವಂಚಿಸಿರುವುದು ವರದಿಯಿಂದ ಗೊತ್ತಾಗಿದೆ. ಶ್ರೀನಿವಾಸ್ ಅಗ್ರೊ ಸೆಂಟರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗುವುದುವೀರಭದ್ರಪ್ಪ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ರೈತರಿಗೆ ಮೋಸ ಮಾಡುವ ಯಾರನ್ನೂ ಬಿಡುವುದಿಲ್ಲ. ಸಹಾಯಕ ನಿರ್ದೇಶಕರ ವರದಿ ಆಧರಿಸಿ ಶ್ರೀನಿವಾಸ್ ಅಗ್ರೊ ಸೆಂಟರ್ ಪರವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದುಕೆ. ಮಲ್ಲಿಕಾರ್ಜುನ ಕೃಷಿ ಇಲಾಖೆ ಜಂಟಿ ನಿರ್ದೇಶಕ
‘ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರ’
‘ಕೃಷಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರ ಕೃಷಿ ಇಲಾಖೆಯ ಅಧಿಕಾರಿಗಳಿಗಿದೆ. ಇದೇ ಅಧಿಕಾರ ಬಳಸಿಕೊಂಡು ಶ್ರೀನಿವಾಸ್ ಅಗ್ರೊ ಸೆಂಟರ್ ವಿರುದ್ಧ ಪ್ರಕರಣ ದಾಖಲಾಗಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. ‘ಪೊಲೀಸರ ರೀತಿಯಲ್ಲಿಯೇ ಕೃಷಿ ಅಧಿಕಾರಿಗಳು ತನಿಖೆ ಮಾಡುತ್ತಾರೆ. ಪುರಾವೆ ಸಮೇತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಿದ್ದಾರೆ. ಆರೋಪ ಸಾಬೀತಾದರೆ ದಂಡ ಹಾಗೂ ಜೈಲು ಶಿಕ್ಷೆಯಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.