
ಹಾವೇರಿ: ‘ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಠಾನದಲ್ಲಿ ದೊಡ್ಡ ಹಗರಣವಾಗಿದೆ. ರೈತರ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ಹೂಡಿಕೆ ಮಾಡುತ್ತಿರುವ ಮಧ್ಯವರ್ತಿಗಳು, ಬೆಳೆ ಹಾನಿ ಪ್ರದೇಶ ನಿರ್ಧರಿಸಿ ವಿಮೆ ಪಡೆಯುತ್ತಿದ್ದಾರೆ. ನೈಜ ರೈತರಿಗೆ ಅನ್ಯಾಯವಾಗುತ್ತಿದೆ. ಈ ಮಧ್ಯವರ್ತಿಗಳ ಹಗರಣದಲ್ಲಿ ಕೃಷಿ ಸೇರಿ ಹಲವು ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದ ಸಂಸದ ಬಸವರಾಜ ಬೊಮ್ಮಾಯಿ ಅವರು, ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಅವರನ್ನು ತರಾಟೆಗೆ ತೆಗೆದುಕೊಂಡರು.
ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಪಾಲ್ಗೊಂಡಿದ್ದ ಬಸವರಾಜ ಬೊಮ್ಮಾಯಿ, ಬೆಳೆ ವಿಮೆಯಲ್ಲಿ ಆಗುತ್ತಿರುವ ಅಕ್ರಮವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
‘ಪ್ರಸಕ್ತ ಮುಂಗಾರಿನಲ್ಲಿ ಶಿಗ್ಗಾವಿ ತಾಲ್ಲೂಕಿನಲ್ಲಿ 44,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಬಹುತೇಕ ರೈತರು ಬೆಳೆ ವಿಮೆ ತುಂಬಿದ್ದಾರೆ. ಆದರೆ, 710 ಹೆಕ್ಟೇರ್ ಪ್ರದೇಶ ಮಾತ್ರ ಬೆಳೆ ಹಾನಿಯಾಗಿದೆ ಎಂದು ವರದಿ ಕೊಟ್ಟಿದ್ದೀರಾ? ಇಷ್ಟು ವ್ಯತ್ಯಾಸ ಹೇಗೆ ?. ಬಯಲು ಸೀಮೆಯಲ್ಲಿ ಕೆರೆಗಳು ತುಂಬಿವೆ. ವಿಪರೀತ ಮಳೆಯಿಂದ ಬೆಳೆಗಳು ನೆಲಕಚ್ಚಿ ರೈತರು ಕಂಗಾಲಾಗಿದ್ದಾರೆ. ಆದರೆ, ಕೃಷಿ ಅಧಿಕಾರಿಗಳು ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳ ಜಂಟಿ ಸಮೀಕ್ಷಾ ತಂಡ, ಕೇವಲ 710 ಹೆಕ್ಟೇರ್ ಹಾನಿ ಎಂದು ವರದಿ ನೀಡಿದೆ. ಇದು ಯಾವ ಸಮೀಕ್ಷೆ’ ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
‘ಬೆಳೆ ವಿಮೆ ಪಾವತಿಸಲು ಜಿಲ್ಲೆಯಲ್ಲಿ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಅವರೇ ರೈತರ ಹೆಸರಿನಲ್ಲಿ ಕಂತು ತುಂಬುತ್ತಿದ್ದಾರೆ. ಅವರು ಹೇಳಿದ ರೈತರಿಗೆ ವಿಮೆ ಹಣ ಬರುತ್ತಿದೆ. ಅದರಲ್ಲಿ ಕಮಿಷನ್ ಪಡೆಯುತ್ತಿದ್ದಾರೆ. ನೈಜವಾಗಿ ಹಣ ತುಂಬಿದ ರೈತರಿಗೆ ಹಣ ಬರುತ್ತಿಲ್ಲ. ಬಂದರೂ ಅತೀ ಕಡಿಮೆ. ಬೆಳೆ ಹಾನಿ ಪ್ರದೇಶದ ಬಗ್ಗೆ ಮಧ್ಯವರ್ತಿಗಳಿಗೆ ಹೇಗೆ ಮಾಹಿತಿ ಗೊತ್ತಾಗುತ್ತದೆ. ಮಧ್ಯವರ್ತಿಗಳು ಹೇಳಿದ ಪ್ರದೇಶವನ್ನು ಬೆಳೆ ಹಾನಿ ಎಂದು ಗುರುತಿಸುವ ಕೆಲಸವಾಗುತ್ತಿದೆ. ಕೃಷಿ ಇಲಾಖೆಯ ಕಚೇರಿಯಲ್ಲಿರುವ ಅಧಿಕಾರಿಯೊಬ್ಬ, ಮಧ್ಯವರ್ತಿಗಳ ಜೊತೆ ಶಾಮೀಲಾಗಿದ್ದಾನೆ. ಆತನ ಮಾಹಿತಿಯನ್ನು ನೀಡುತ್ತೇನೆ. ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಲೋಕಾಯುಕ್ತಕ್ಕೆ ನಾನೇ ದೂರು ನೀಡುತ್ತೇನೆ’ ಎಂದು ಗುಡುಗಿದರು.
‘ಬೆಳೆ ವಿಮೆ ಪಡೆಯುವುದಲ್ಲಿ ಹಾವೇರಿ ಜಿಲ್ಲೆ ಮುಂದಿತ್ತು. ಆದರೆ, ಈಗ ಅಧಿಕಾರಿಗಳು ಯಾವುದೇ ಆಸಕ್ತಿ ತೋರುತ್ತಿಲ್ಲ. ವಿಮೆಯೂ ಸಮರ್ಪಕವಾಗಿ ಬರುತ್ತಿಲ್ಲ. ಈಗ ಮಧ್ಯವರ್ತಿಗಳ ಹಾವಳಿಯೂ ಶುರುವಾಗಿದೆ. ಈ ರೀತಿಯಾದರೆ, ಬಡ ರೈತರು ಏನು ಮಾಡಬೇಕು. ಕಡಿಮೆ ಬೆಳೆ ಹಾನಿ ತೋರಿಸುವ ಅಧಿಕಾರಿಗಳು, ವಿಮೆ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದ್ದಾರೆ. ರೈತರು ಹಾಗೂ ಸರ್ಕಾರ ಇಬ್ಬರಿಗೂ ಮೋಸ ಮಾಡುತ್ತಿದ್ದಾರೆ. ಯಾವ ಯೋಜನೆ ಬಂದರೂ, ಯಾವ ರೀತಿ ಹಣ ಮಾಡುವುದು ? ಎಂಬುದಷ್ಟೇ ಅಧಿಕಾರಿಗಳು ಕಾಯುತ್ತಿರುತ್ತಾರೆ’ ಎಂದು ದೂರಿದರು.
‘ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹೇಗಿದ್ದಾರೆ? ಎಂಬುದು ನನಗೆ ಗೊತ್ತಿದೆ. ಜಿಲ್ಲೆಯ ಹಣವನ್ನು ಬಾಗಲಕೋಟೆ ರೈತರ ಖಾತೆಗೆ ಜಮೆ ಮಾಡಿ ಜೈಲಿಗೆ ಹೋದ ತಹಶೀಲ್ದಾರ್‌ಗಳನ್ನೂ ನೋಡಿದ್ದೇನೆ. ವಿಮೆ ಹಗರಣವನ್ನು ಸಿಐಡಿ ಅಥವಾ ಸಿಬಿಐಗೆ ಕೊಟ್ಟರೆ, ಎಲ್ಲ ಹುಳುಕು ಹೊರಗೆ ಬರುತ್ತದೆ. ರೈತರ ಅನ್ನ ತಿನ್ನುತ್ತೀರಾ. ಈ ರೀತಿ ಮೋಸ ಮಾಡುವುದನ್ನು ಬಿಟ್ಟು, ರೈತರ ಕೆಲಸ ಮಾಡಿ. ಅದು ಕೊನೆಯ ಕಾಲದಲ್ಲಿ ಮನಸ್ಸಿಗೆ ತೃಪ್ತಿ ನೀಡುತ್ತದೆ’ ಎಂದು ಬುದ್ದಿವಾದ ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ‘ಮಾಹಿತಿ ನೀಡಿದರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
ಸ್ಥಳೀಯರ ವಿರೋಧಿ ಕರ್ನಾಟಕ ಬ್ಯಾಂಕ್: ಜಿಲ್ಲೆಯ ಜನರಿಗೆ ಸಾಲ ನೀಡುವಲ್ಲಿ ಗುರಿ ಸಾಧನೆ ಮಾಡದ ಕರ್ನಾಟಕ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಸವರಾಜ ಬೊಮ್ಮಾಯಿ, ‘ಸ್ಥಳೀಯರಿಂದ ಠೇವಣಿ ಇರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸಾಲ ಏಕೆ ನೀಡುವುದಿಲ್ಲ. ಎಲ್ಲ ಸಾಲವನ್ನು ದಕ್ಷಿಣ ಕನ್ನಡ, ಉಡುಪಿ, ಮುಂಬೈನಲ್ಲಿರುವವರಿಗೆ ಕೊಡುತ್ತೀರಾ. ನಿಮ್ಮದು ಸ್ಥಳೀಯರ ವಿರೋಧಿ ಬ್ಯಾಂಕ್. ಇದರ ವಿರುದ್ಧ ಅಭಿಯಾನ ಮಾಡಿಸುತ್ತೇವೆ’ ಎಂದು ಖಡಕ್ ಎಚ್ಚರಿಕೆ ನೀಡಿದರು.
‘ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಿಗೆ (ಎಂ.ಡಿ.) ನೋಟಿಸ್ ನೀಡಿ. ಮುಂದಿನ ಸಭೆಗೆ ಹಾಜರಾಗುವಂತೆ ಸೂಚಿಸಿ’ ಎಂದರು.
ಶಾಖೆ ತೆರೆಯಲು ಡಿಸೆಂಬರ್ ಗಡುವು: ‘ಹಾವೇರಿ ತಾಲ್ಲೂಕಿನ ಹೊಸರಿತ್ತಿ ಹಾಗೂ ಶಿಗ್ಗಾವಿ ತಾಲ್ಲೂಕಿನ ಚಂದಾಪುರದಲ್ಲಿ ಬ್ಯಾಂಕ್ ಶಾಖೆ ತೆರೆಯಲು ಹಲವು ವರ್ಷಗಳಿಂದ ಹೇಳುತ್ತಿದ್ದೇನೆ. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದೇ ಡಿಸೆಂಬರ್ ಅಂತ್ಯಕ್ಕೆ ಶಾಖೆಗಳು ಆರಂಭವಾಗಬೇಕು’ ಎಂದು ಬೊಮ್ಮಾಯಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಮ ಪಂಚಾಯಿತಿ ವಹಿವಾಟು ಬಂದ್: ‘ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿ) ಶಾಖೆಗಳಲ್ಲಿ ಖಾತೆ ಹೊಂದಿದ್ದ ಗ್ರಾಮ ಪಂಚಾಯಿತಿಗಳ ವಹಿವಾಟು ಏಪ್ರಿಲ್‌ನಿಂದಲೇ ಬಂದ್ ಆಗಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿಲೀನ ಹೆಸರಿನಲ್ಲಿ ಈ ರೀತಿಯಾಗುವುದು ಸರಿಯಲ್ಲ. ಇದರಿಂದ ಬೇಸತ್ತ ಹಲವು ಪಂಚಾಯಿತಿಯವರು, ಈಗಾಗಲೇ ಬೇರೆ ಬ್ಯಾಂಕ್‌ಗಳಲ್ಲಿ ಖಾತೆ ಮಾಡಿಕೊಂಡಿದ್ದಾರೆ. ಜನರು ಸಹ ಹಣದ ವಹಿವಾಟು ನಡೆಸಲು ಪರದಾಡುತ್ತಿದ್ದಾರೆ’ ಎಂದು ಬೊಮ್ಮಾಯಿ ದೂರಿದರು.
ಬ್ಯಾಂಕ್ ಪ್ರತಿನಿಧಿ ಮಾತನಾಡಿ, ‘ಐಎಫ್‌ಎಸ್‌ಸಿ ಕೋಡ್ ಬದಲಾವಣೆಯಿಂದ ಸಮಸ್ಯೆಯಾಗಿತ್ತು. ಈಗ ಶೇ 75ರಷ್ಟು ಸಮಸ್ಯೆ ಬಗೆಹರಿದಿದೆ. ಉಳಿದ ಸಮಸ್ಯೆ ಆದಷ್ಟು ಬೇಗ ಸರಿಯಾಗಲಿದೆ’ ಎಂದರು.
ಬಡವರು, ಉದ್ಯೋಗಿಗಳಿಗೆ ಸಾಲ ನೀಡಿ: ‘ಬಡವರು ಹಾಗೂ ಹೊಸ ಉದ್ಯೋಗಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರವು ಪಿ.ಎಂ. ಸ್ವನಿಧಿ, ಮುದ್ರಾ ಸೇರಿದಂತೆ ವಿವಿಧ ಯೋಜನೆ ರೂಪಿಸಿದೆ. ಆದರೆ, ಹಲವರಿಗೆ ಈ ಯೋಜನೆ ಮಾಹಿತಿಯಲ್ಲ. ಅರಿವು ಮೂಡಿಸಲು ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅರ್ಜಿ ಹಾಕಿದ ಅರ್ಹರಿಗೆ ತ್ವರಿತವಾಗಿ ಸಾಲ ನೀಡಬೇಕು’ ಎಂದು ಬೊಮ್ಮಾಯಿ ಸೂಚನೆ ನೀಡಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ, ಜಿ.ಪಂ. ಉಪ ಕಾರ್ಯದರ್ಶಿ ಪುನೀತ್, ಬ್ಯಾಂಕ್ ಅಧಿಕಾರಿಗಳಾದ ಸೂರಜ್ ಎನ್., ನಬಾರ್ಡ್‍ನ ರಂಗನಾಥ್ ಸಭೆಯಲ್ಲಿದ್ದರಿ.
‘ನಾಮಕಾವಸ್ಥೆ ಸಭೆಗೆ ಬರಬೇಡಿ’
‘ಬ್ಯಾಂಕಿಂಗ್ ವ್ಯವಸ್ಥೆಯಿಂದ ಜಿಲ್ಲೆಯ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಈ ಸಭೆ ಮಾಡಲಾಗುತ್ತದೆ. ಆದರೆ ಇಲ್ಲಿ ನೀಡುವ ಸೂಚನೆಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ. ನಾಮಕಾವಸ್ಥೆ ಸಭೆಗೆ ಬರಬೇಡಿ. ಆಸಕ್ತಿ ಇಲ್ಲದಿದ್ದರೆ ತಿಳಿಸಿ ನಾನು ಸಭೆಯನ್ನೇ ಮಾಡುವುದಿಲ್ಲ. ಎಲ್ಲದಕ್ಕೂ ಪತ್ರದ ಮೂಲಕ ಉತ್ತರಿಸಲು ನನಗೆ ಗೊತ್ತಿದೆ’ ಎಂದು ಬಸವರಾಜ ಬೊಮ್ಮಯಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಕಳೆದ ಸಭೆಯಲ್ಲಿ ನೀಡಿದ್ದ ಸೂಚನೆ ಪಾಲಿಸದ ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಅವರು ‘ನಾನು ಪದೇ ಪದೇ ಹೇಳುತ್ತಿದ್ದೇನೆ. ಆದರೆ ಅಧಿಕಾರಿಗಳು ಬದಲಾವಣೆ ಆಗುತ್ತಿಲ್ಲ. ಈ ರೀತಿಯಾದರೆ ಸಭೆ ಏಕೆ ಬೇಕು? ಇನ್ನಾದರೂ ಹೇಳಿದ ಕೆಲಸ ಮಾಡಿ’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.