ADVERTISEMENT

ಹಾವೇರಿ | ಬೆಳೆ ಹಾನಿ ಪರಿಹಾರಕ್ಕೆ ರೈತರ ಆಗ್ರಹ

ರೈತರ ಜಮೀನುಗಳಿಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 2:04 IST
Last Updated 8 ಸೆಪ್ಟೆಂಬರ್ 2025, 2:04 IST
ಹಾವೇರಿ ಜಿಲ್ಲೆಯಲ್ಲಿ ಬೆಳೆ ಹಾನಿಯಾದ ಜಮೀನುಗಳಿಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು
ಹಾವೇರಿ ಜಿಲ್ಲೆಯಲ್ಲಿ ಬೆಳೆ ಹಾನಿಯಾದ ಜಮೀನುಗಳಿಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು   

ಹಾವೇರಿ: ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಲು ಸೂಚನೆ ನೀಡಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಭಾನುವಾರ ಹಲವು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಳಗೊಂಡ, ತಡಸ, ಮತ್ತೂರು, ಮಡ್ಲೂರು, ಕಚವಿ, ಚಿನ್ನಮುಳಗುಂದ, ಬಾಳೂರು, ಹನುಮನಹಳ್ಳಿ, ಬಾಳಂಬಿಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ, ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಗೋವಿನ ಜೋಳ, ಹೆಸರು, ಭತ್ತ, ಶುಂಠಿ ಸೇರಿದಂತೆ ಎಲ್ಲ ಬಗೆಯ ಬೆಳೆಯ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಯವರು ತಿಳಿದುಕೊಂಡರು.

ತಮ್ಮ ಜಮೀನಿಗೆ ಬಂದ ಜಿಲ್ಲಾಧಿಕಾರಿ ಎದುರು ಅಳಲು ತೋಡಿಕೊಂಡ ರೈತರು, ‘ಮುಂಗಾರು ಪೂರ್ವ ಮಳೆ ಮುಗಿದು ಮುಂಗಾರು ಮಳೆ ಶುರುವಾಗುತ್ತಿದ್ದಂತೆ, ಜಮೀನು ಹದಗೊಳಿಸಿ ಗೋವಿನ ಜೋಳ ಬಿತ್ತನೆ ಮಾಡಿದ್ದೆವು. ಆದರೆ, ಜಿಟಿ ಜಿಟಿ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಇಡೀ ಬೆಳೆ ಹಾನಿಯಾಗಿದೆ’ ಎಂದು ಹೇಳಿದರು.

ADVERTISEMENT

‘ಎಕರೆಗೆ ₹ 15 ಸಾವಿರದಿಂದ ₹30 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದೆವು. ಕಟಾವು ಬರುವ ಸಮಯದಲ್ಲಿಯೇ ಇಡೀ ಬೆಳೆ ಒಣಗಿದೆ. ಈ ವರ್ಷ ಬೆಳೆ ಸಂಪೂರ್ಣ ನಾಶವಾಗಿದ್ದು, ನಮಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ, ಮಾಡಿದ ಸಾಲ ತೀರಿಸಲು ಸಹ ನಾವೆಲ್ಲರೂ ಪರದಾಡಬೇಕಾಗುತ್ತದೆ’ ಎಂದು ತಿಳಿಸಿದರು.

ರೈತರ ಮನವಿ ಆಲಿಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ, ‘ಜಿಲ್ಲೆಯಲ್ಲಿ ಅಂದಾಜು 22 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿರುವ ಮಾಹಿತಿಯಿದೆ. ಹಾನಿ ಬಗ್ಗೆ ರೈತರು ನೀಡಿರುವ ಮನವಿಗಳನ್ನು ಪರಿಗಣಿಸಲಾಗಿದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಜಂಟಿ ಸಮೀಕ್ಷೆಯನ್ನೂ ಆರಂಭಿಸಲಾಗಿದೆ’ ಎಂದರು.

ಜಿಲ್ಲೆಯಲ್ಲಿ ಅಂದಾಜು 22 ಸಾವಿರ ಹೆಕ್ಟೇರ್ ಬೆಳೆ ಹಾನಿ ಕೃಷಿ, ತೋಟಗಾರಿಕೆ, ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ಸಮೀಕ್ಷೆ ಬಳಿಕ ಸೂಕ್ತ ಪರಿಹಾರ ಒದಗಿಸುವ ಭರವಸೆ

16 ಸಾವಿರ ಹೆಕ್ಟೇರ್‌ ಜಮೀನಿನ ಬೆಳೆ ಸಮೀಕ್ಷೆ ಮುಗಿದಿದೆ. ಇನ್ನು 6 ಸಾವಿರ ಹೆಕ್ಟೇರ್‌ ಜಮೀನು ಸಮೀಕ್ಷೆ ಬಾಕಿಯಿದೆ. ಸಮೀಕ್ಷೆ ಮುಗಿದ ಬಳಿಕ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು
ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.