ADVERTISEMENT

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರ ಸಭೆ ಫೆ.15,16ರಂದು

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 13:31 IST
Last Updated 4 ಜನವರಿ 2022, 13:31 IST
ಎಂ. ಗುರುಮೂರ್ತಿ
ಎಂ. ಗುರುಮೂರ್ತಿ   

ಹಾವೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ‘ಸರ್ವ ಸದಸ್ಯರ ಸಭೆ’ಯು ದಾವಣಗೆರೆಯ ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಫೆ.15 ಮತ್ತು 16ರಂದು ನಡೆಯಲಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಬುದ್ಧಿಜೀವಿಗಳನ್ನು ಸಭೆಗೆ ಕರೆಸಿ, ಸಮಿತಿಯ ಸಂಘಟನೆ ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸುತ್ತೇವೆ’ ಎಂದರು.

‘ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಕೆಲವು ಭಿನ್ನಾಭಿಪ್ರಾಯಗಳಿಂದ ನಾಲ್ಕಾರು ಬಣಗಳಾಗಿ ಹರಿದು ಹಂಚಿ ಹೋಗಿತ್ತು. ಈ ಸಮಿತಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ, 2012ನೇ ಸಾಲಿನಲ್ಲಿ ಭದ್ರಾವತಿಯ ನ್ಯಾಯಾಲಯದಲ್ಲಿ ದೂರು ದಾಖಲಾಗಿ 9 ವರ್ಷ ಸುದೀರ್ಘ ವಿಚಾರಣೆ ನಡೆದು 2021ರ ಮಾರ್ಚ್‌ 24ರಂದು ಎನ್‌.ಗಿರಿಯಪ್ಪ ಮತ್ತು ಎಂ.ಗುರುಮೂರ್ತಿ ಸಮಿತಿಯ ವಾರಸುದಾರರು ಎಂದು ನ್ಯಾಯಾಲಯದಿಂದ ಆದೇಶವಾಗಿದೆ ಎಂದು ತಿಳಿಸಿದರು.

ADVERTISEMENT

ಸಮಿತಿಯ ಬಣಗಳಲ್ಲಿ ನಾಲ್ಕು ಸಂಘಟನೆಗಳು 2021ರ ನವೆಂಬರ್‌ನಲ್ಲಿ ಶಿವಮೊಗ್ಗದ ಗಾಜನೂರಿನಲ್ಲಿ ನಡೆದ ಐಕ್ಯತಾ ಸಮಾವೇಶದಲ್ಲಿ ವಿಲೀನವಾದವು. ನಂತರ ವಿವಿಧ ಬಣಗಳ ವಿಲೀನಕ್ಕೆ ಕರೆ ಕೊಡುತ್ತಾ ಸಮಾಲೋಚನಾ ಸಭೆಗಳನ್ನು ಮಾಡುತ್ತಾ ಬರಲಾಗಿದೆ. ಬಲಿಷ್ಠವಾದ ಸಂಘಟನೆ ಕಟ್ಟಲು ಸಮುದಾಯದ ಬಂಧುಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಹನುಮಂತಪ್ಪ ಕಾಕರ್ಗಲ್‌, ಹೊನ್ನೇಶ್ವರ ತಗಡಿನಮನಿ, ಎಸ್‌.ಫಕ್ಕೀರಪ್ಪ ಕಾರವಾರ, ಅಕ್ಷತಾ ಕೆ.ಸಿ., ನಾಗರಾಜ ಮಾಳಗಿ, ಬಸವರಾಜ, ಅಶೋಕ ಮರೆಣ್ಣನವರ ಇತರ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.