ADVERTISEMENT

ವ್ಯಸನ ಮುಕ್ತ ಜೈಲು: 223 ಕೈದಿಗಳಿಂದ ಪತ್ರ

ಹಾವೇರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಪರಿವರ್ತನೆ: ಸಂದರ್ಶಕರ ಮಂಡಳಿ ಪ್ರಯತ್ನಕ್ಕೆ ಯಶಸ್ಸು

ಹರ್ಷವರ್ಧನ ಪಿ.ಆರ್.
Published 7 ಜುಲೈ 2018, 8:31 IST
Last Updated 7 ಜುಲೈ 2018, 8:31 IST
ಹಾವೇರಿ ಜಿಲ್ಲಾ ಕೇಂದ್ರ ಕಾರಾಗೃಹ
ಹಾವೇರಿ ಜಿಲ್ಲಾ ಕೇಂದ್ರ ಕಾರಾಗೃಹ   

ಹಾವೇರಿ: ಇಲ್ಲಿನ ಕೆರಿಮತ್ತಿಹಳ್ಳಿಯ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಜುಲೈ 7ರಂದು ಬೆಳಿಗ್ಗೆ 11ಕ್ಕೆ ‘ವಿಶ್ವ ಮಾದಕ ವ್ಯಸನ ವಿರೋಧಿ ದಿನಾಚರಣೆ’ ನಡೆಯಲಿದ್ದು, ಎಲ್ಲ 223 ಕೈದಿಗಳು ‘ವ್ಯಸನ ಮುಕ್ತ’ರಾಗುವ ಕುರಿತು ಪ್ರಮಾಣ ಪತ್ರನ್ನು ಸಲ್ಲಿಸಲಿದ್ದಾರೆ.

ಕಾರಾಗೃಹದಲ್ಲಿ 205 ಪುರುಷ ಹಾಗೂ 18 ಮಹಿಳಾ ಕೈದಿಗಳು ಇದ್ದಾರೆ. ಮಹಿಳಾ ಕೈದಿಗಳಿಬ್ಬರ ಇಬ್ಬರು ಮಕ್ಕಳೂ ಇಲ್ಲಿದ್ದಾರೆ. ಎಲ್ಲರೂ ವ್ಯಸನ ಮುಕ್ತ ಜೀವನ ನಡೆಸುವ ಪ್ರತಿಜ್ಞೆ ಸ್ವಿಕರಿಸಿದ್ದಾರೆ ಎಂದು ಜೈಲರ್ ಟಿ.ಬಿ. ಭಜಂತ್ರಿ ‘ಪ್ರಜಾವಾಣಿ’ಗೆ ದೃಢಪಡಿಸಿದರು.

2008ರಲ್ಲಿ ಆರಂಭಗೊಂಡ ಜಿಲ್ಲಾ ಕಾರಾಗೃಹವು ಪೂರ್ಣ ಪ್ರಮಾಣದ ಮೂಲಸೌಕರ್ಯ ಹೊಂದಿರಲಿಲ್ಲ. ಹಲವು ಸಮಸ್ಯೆಗಳಿಂದ ಬಳಲಿತ್ತು. ಕೈದಿಗಳೇ ಹೆಚ್ಚಾಗಿರುವ ಜೈಲಿನ ಬಗ್ಗೆ ತಾತ್ಸರ ಭಾವವೇ ಹೆಚ್ಚಾಗಿತ್ತು.

ADVERTISEMENT

ಆದರೆ, 2017ರ ಆಗಸ್ಟ್ 8ರಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಅಧ್ಯಕ್ಷತೆಯಲ್ಲಿ ನಡೆದ ಕಾರಾಗೃಹದ ಸಂದರ್ಶಕರ ಮಂಡಳಿಯ ಸಭೆಯು ಪರಿವರ್ತನೆಗೆ ನಾಂದಿ ಹಾಡಿತು. ಜೈಲರ್ ತಿಮ್ಮಣ್ಣ ಬಿ. ಭಜಂತ್ರಿ (ಸದಸ್ಯ ಕಾರ್ಯದರ್ಶಿ) ಹಾಗೂ ಹಿರಿಯ ನ್ಯಾಯಾಧೀಶರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಒಳಗೊಂಡ ಮಂಡಳಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿತ್ತು.

ಜಿಲ್ಲಾಧಿಕಾರಿ ಹಾಗೂ ನ್ಯಾಯಾಧೀಶರುಗಳ ಮಾರ್ಗದರ್ಶನದಲ್ಲಿ ಜೈಲರ್ ಹಂತ ಹಂತವಾಗಿ ಯೋಜನೆಗಳನ್ನು ಜಾರಿಗೊಳಿಸಿದರು. ಇದರ ಪ್ರಯತ್ನವಾಗಿ ಶುದ್ಧಕುಡಿಯುವ ನೀರು, ಗ್ರಂಥಾಲಯ, ಕೌಶಲ ತರಬೇತಿ, ಅಕ್ಷರ ಕಲಿಕೆ, ಆದಾಯ ವೃದ್ಧಿಗೆ ಪರ್ಯಾಯ ವೃತ್ತಿ, ಸ್ವಚ್ಛತೆ, ತರಕಾರಿ ಬೆಳೆ ಸೇರಿದಂತೆ ಪರಿವರ್ತನೆಯ ಕೆಲಸಗಳು ನಡೆದವು. ಸಚಿವರು, ಸಂಸದರು ಹಾಗೂ ಶಾಸಕರು ಸಾಥ್ ನೀಡಿದರು.

ಪರಿವರ್ತನೆ:
ಆ ಬಳಿಕ, ಆಗಸ್ಟ್ 11ರಂದು ‘ಆರೋಗ್ಯ ತಪಾಸಣಾ ಶಿಬಿರ’ ನಡೆದಿತ್ತು. ಬಹುತೇಕ ಕೈದಿಗಳು ಚರ್ಮ ಮತ್ತು ಜೀರ್ಣ ಕ್ರಿಯೆಯ ಸಮಸ್ಯೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿತ್ತು. ಅವರಿಗೆ ಔಷಧಿಯ ಜೊತೆಗೆ ಯೋಗ, ಸ್ವಚ್ಛತೆಯ ತರಬೇತಿ ಆರಂಭಿಸಲಾಗಿತ್ತು.

ಆಗಸ್ಟ್ 15ರಂದು ನ್ಯಾಯಾಧೀಶರುಗಳು ಕಾರಾಗೃಹದಲ್ಲೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದು, ದುಶ್ಚಟ ಮುಕ್ತರಾಗುವ ಪಾಠ ಮಾಡಿದ್ದರು. ಅಂದು ಜೈಲಿನಲ್ಲಿದ್ದ 187 ಕೈದಿಗಳ ಪೈಕಿ 24 ಕೈದಿಗಳು ‘ದುಶ್ಚಟ, ಕಾನೂನು ಬಾಹಿರ ಚಟುವಟಿಕೆಗಳನ್ನು ಬಿಟ್ಟು ಉತ್ತಮ ಜೀವನ ನಡೆಸುತ್ತೇವೆ’ ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆ. ಈಶಪ್ಪ ಭೂತೆ ಅವರಿಗೆ ಪತ್ರ ಸಲ್ಲಿಸಿದ್ದರು.

ಅನಂತರ ಆಸಕ್ತರಿಗೆ ರೆಡ್‌ಕ್ರಾಸ್ ಹಾಗೂ ವಿವಿಧ ಸಂಘ–ಸಂಸ್ಥೆಗಳ ನೆರವಿನ ಮೂಲಕ ‘ದುಶ್ಚಟ ಮುಕ್ತ ಚಿಕಿತ್ಸೆ’ ಆರಂಭಿಸಲಾಗಿತ್ತು. ಮಾದಕ ವ್ಯಸನ ಪದಾರ್ಥಗಳನ್ನು ಜೈಲಿಗೆ ತಾರದಂತೆ ಕಠಿಣ ಕ್ರಮಕೈಗೊಳ್ಳಲಾಗಿತ್ತು. ದುಶ್ಚಟ ಮುಕ್ತರಾಗಲು ಬಯಸಿದ ಕೈದಿಗಳಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿತ್ತು. ಉಳಿದವರಿಗೆ ಪ್ರೇರಣೆ ನೀಡಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಹಲವು ಕೈದಿಗಳು ವ್ಯಸನ ಮುಕ್ತರಾಗುವುದಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಿದ್ದರು.

ದಿನಾಚರಣೆ: ಜುಲೈ 7ರ ಕಾರ್ಯಕ್ರಮವನ್ನು ಬೆಳಿಗ್ಗೆ 11.30ಕ್ಕೆ ಹೊಸಮಠದ ಚರಮೂರ್ತಿ ಶಾಂತಲಿಂಗ ಸ್ವಾಮೀಜಿ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಅಧ್ಯಕ್ಷತೆ ವಹಿಸುವರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪಂಚಾಯ್ತಿ ಸಿಇಒ ಶಿಲ್ಪಾ ನಾಗ್, ಸಾಹಿತಿ, ಸತೀಶ ಕುಲಕರ್ಣಿ ಮತ್ತಿತರರು ಪಾಲ್ಗೊಳ್ಳುವರು.

*
ಎಲ್ಲ 223 ಕೈದಿಗಳು ವ್ಯಸನ ಮುಕ್ತರಾಗುವುದಾಗಿ ಪತ್ರ ಸಲ್ಲಿಸಲಿದ್ದಾರೆ. ‘ವ್ಯಸನ ಮುಕ್ತ ಜೈಲು’ ಎಂಬ ಮಾನ್ಯತೆ ನೀಡುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
–ಟಿ.ಬಿ. ಭಜಂತ್ರಿ ಜೈಲರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.